ತುಮಕೂರು
ಕರ್ನಾಟಕ ರಾಜ್ಯದ ಒಂದು ಜಿಲ್ಲೆ ; ತಾಲ್ಲೂಕು ; ಇವುಗಳ ಅಡಳಿತ ಕೇಂದ್ರ. ಉ.ಅ. 12045' -14020' ಮತ್ತು ಪೂ.ರೇ. 6020'-70031' ನಡುವೆ ಇರುವ ಜಿಲ್ಲೆಯ ಉತ್ತರಕ್ಕೆ ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆ; ಪಶ್ಚಿಮಕ್ಕೆ ಚಿತ್ರದುರ್ಗ, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಗಳು, ದಕ್ಷಿಣಕ್ಕೆ ಮಂಡ್ಯ ಜಿಲ್ಲೆ ; ಪೂರ್ವಕ್ಕೆ ಬೆಂಗಳೂರು ಮತ್ತು ಕೋಲಾರ ಜಿಲ್ಲೆಗಳು ಇವೆ. ಇದರ ತಾಲ್ಲೂಕುಗಳಲ್ಲೊಂದಾದ ಪಾವಗಡದ ಪಶ್ಚಿಮದ ಅಂಚಿನ ಒಂದು ಭಾಗ ವಿನಾ ಉಳಿದ ಕಡೆಯಲ್ಲೆಲ್ಲ ಅದನ್ನು ಆಂಧ್ರ ಪ್ರದೇಶದ ಅನಂತಪುರದ ಜಿಲ್ಲೆ ಬಳಸಿದೆ. ಪಶ್ಚಿಮದ ಅಂಚಿನಲ್ಲಿ ಅ ತಾಲ್ಲೂಕು ಚಿತ್ರದುರ್ಗ ಜಿಲ್ಲೆಗೆ ಸೇರಿದಂತಿದೆ. ತುಮಕೂರು ಜಿಲ್ಲೆಯ ಉಳಿದ ಭಾಗದಿಂದ ಈ ತಾಲ್ಲೂಕು ಸಂಪೂರ್ಣ ಪ್ರತ್ಯೇಕವಾಗಿ ಇದೆ. ಈ ತಾಲ್ಲೂಕನ್ನು 1886 ರಲ್ಲಿ ಚಿತ್ರದುರ್ಗ ಜಿಲ್ಲೆಯಿಂದ ಈ ಜಿಲ್ಲೆಗೆ ವರ್ಗಾಯಿಸಲಾಯಿತು. ಜಿಲ್ಲೆಯ ವಿಸ್ತೀರ್ಣ 10,606 ಚ.ಕಿಮೀ. ಜನಸಂಖ್ಯೆ 25,79,516 (2001). ಚಿಕ್ಕನಾಯಕನಹಳ್ಳಿ (2,09,539), ಗುಬ್ಬಿ (2,56,144), ಕೊರಟಗೆರೆ (1,60,669), ಕುಣಿಗಲ್ (2,35,182), ಮಧುಗಿರಿ (2,64,447). ಪಾವಗಡ (2,46,238), ಶಿರಾ (3,01,255), ತಿಪಟುರು (2,16,826), ತುಮಕೂರು (5,15,601), ತುರುವೇಕೆರೆ (11,73,615)-ಇವು ಜಿಲ್ಲೆಯ ತಾಲ್ಲೂಕುಗಳು.

ಭೌತಲಕ್ಷಣ : ತುಮಕೂರು ಜಿಲ್ಲೆಯನ್ನು ಇತರ ಜಿಲ್ಲೆಗಳಿಂದ ಪ್ರತ್ಯೇಕಿಸುವ ನದಿಗಳಾಗಲಿ ಬೆಟ್ಟಗಳಾಗಲಿ ಅದರ ಗಡಿಗಳ ಬಳಿ ಇಲ್ಲ. ಕುಣಿಗಲ್ ತಾಲ್ಲೂಕಿನ ದಕ್ಷಿಣಕ್ಕೆ ಇರುವ ಪ್ರದೇಶ ಬೆಟ್ಟಗುಡ್ಡಗಳಿಂದ ಕೂಡಿದೆ. ಉಳಿದ ಭಾಗ ಸಾಮಾನ್ಯವಾಗಿ ಅಲೆಯಲೆಯಾಗಿ ಏರಿಳಿಯುವ ಮೈದಾನ ಪ್ರದೇಶ. ಜಿಲ್ಲೆಯ ಪಶ್ಚಿಮ ಭಾಗದಲ್ಲಿ ಸ್ಥೂಲವಾಗಿ ದಕ್ಷಿಣ-ಅಗ್ನೇಯವಾಗಿ ಹಬ್ಬಿರುವ ಬೆಟ್ಟಗಳ ಸಾಲುಗಳಿವೆ. ಇದು ಚಿತ್ರದುರ್ಗ ಶಿಸ್ಟ್ ಪಟ್ಟೆಯ ವಿಸ್ತರಣೆ. ಇವು ರಾಜ್ಯದಲ್ಲಿರುವ ಧಾರವಾಡ ಶಿಸ್ಟ್‍ಗಳ ಮಧ್ಯದ ಗುಂಪಿನವು. ಜಿಲ್ಲೆಯ ಪೂರ್ವ ಭಾಗದಲ್ಲಿ ಗ್ರಾನೈಟೀಯ ಬೆಟ್ಟಗಳ ಕಿರಿದಾದ ಶ್ರೇಣಿಯಿದೆ. ಇದು ಕ್ಲೋಸ್‍ಪೇಟ್ ಗ್ರಾನೈಟುಗಳ ಉತ್ತರದ ವಿಸ್ತøತ ಭಾಗ. ಸರಾಸರಿ 20 ಮೈ. ಅಗಲವಾಗಿರುವ ಇವು ಜಿಲ್ಲೆಯಲ್ಲಿ ದಕ್ಷಿಣೋತ್ತರವಾಗಿ ಹಬ್ಬಿವೆ. ದೇವರಾಯನ ದುರ್ಗ ಮತ್ತು ಮಧುಗಿರಿ ಬೆಟ್ಟಗಳು ಈ ಗುಂಪಿನವು. ಪೂರ್ವದ ಗ್ರಾನೈಟ್ ಶ್ರೇಣಿ ಪಾವಗಡ ಮಧುಗಿರಿ, ಕೊರಟರೆಗೆ ಮತ್ತು ತುಮಕೂರು ತಾಲ್ಲೂಕಿನ ಉತ್ತರ ಭಾಗದಲ್ಲೂ ಇದ್ಕೆ ಸಮಾಂತರವಾಗಿ ಪಶ್ಚಿಮದಲ್ಲಿರುವ, ಶಿಸ್ಟ್ ಶಿಲೆಗಳಿಂದ ಕೂಡಿದ. ಶ್ರೇಣಿ ಚಿಕ್ಕನಾಯಕನಹಳ್ಳಿ, ಶಿರಾ ಮತ್ತು ಗುಬ್ಬಿ ತಾಲ್ಲೂಕುಗಳಲ್ಲೂ ಹಬ್ಬಿದೆ. ಕುಣಿಗಲ್ ತಾಲ್ಲೂಕಿನ ಮಧ್ಯದ ಮತ್ತು ದಕ್ಷಿಣದ ಭಾಗಗಳಲ್ಲಿ ಬೆಟ್ಟಗಳ ಇನ್ನೊಂದು ಗುಂಪಿದೆ. ಜಿಲ್ಲೆಯಲ್ಲಿರುವ ಮುಖ್ಯ ಶಿಖರಗಳು ಇವು ; ತುಮಕೂರು ತಾಲ್ಲೂಕಿನಲ್ಲಿ ದೇವರಾಯನದುರ್ಗ (3,896'), ನಿಜಗಲ್ (3,562'), ರಾಮದೇವರ ಬೆಟ್ಟ (3,881') ಮತ್ತು ಸೀತಾಕಲ್ (3,345') ; ಮಧುಗಿರಿ ತಾಲ್ಲೂಕಿನಲ್ಲಿ ಮಧುಗಿರಿದುರ್ಗ (3,930'), ಮಿಡಿಗೇಶಿದುರ್ಗ (3,409'), ದೊಡ್ಡನರಮಂಗಲ (3,101') ಮತ್ತು ಬ್ಯಾಳ್ಯ (2,913') ; ಕೊರಟಗೆರೆ ತಾಲ್ಲೂಕಿನಲ್ಲಿ ಚನ್ನರಾಯನ ದುರ್ಗ (3,734') ಮತ್ತು ಕೊರಟಗಿರಿ (2,885); ಪಾವಗಡ ತಾಲ್ಲೂಕಿನಲ್ಲಿ ರಾಮನದುರ್ಗ(3,534), ನಿಡುಗಲ್ (3,769') ಮತ್ತು ಪಾವಗಡ(3,012); ತಿಪಟೂರು ತಾಲ್ಲೂಕಿನ ಬೊಮ್ಮನಹಳ್ಳಿ (3,125) ಮತ್ತು ಚೌಡನಹಳ್ಳಿ (2,665') ; ಕುಣಿಗಲ್ ತಾಲ್ಲೂಕಿನಲ್ಲಿ ಹುತ್ರಿದುರ್ಗ (3,708'), ಹುಲಿಯೂರು ದುರ್ಗ (2,771'), ಹೇಮಗಿರಿ (3,083') ಮತ್ತು ರಂಗಸ್ವಾಮಿ ಬೆಟ್ಟ (2,997').

  	ಜಿಲ್ಲೆಯಲ್ಲಿ ಜೀವ ನದಿಗಳಿಲ್ಲ. ಕೆಲವು ಸಣ್ಣ ನದಿಗಳು ಬೆಟ್ಟಗಳಲ್ಲಿ ಹುಟ್ಟಿ ಹರಿಯುತ್ತವೆ. ಬೇಸಗೆಯಲ್ಲಿ ಬತ್ತಿಹೋಗುವ ಈ ಹೊಳೆಗಳಲ್ಲಿ ಕೆಲವು ಅನೇಕ ಕೆರೆಗಳಿಗೆ ನೀರು ಒದಗಿಸುತ್ತವೆ. ಜಿಲ್ಲೆಯ ಅತ್ಯಂತ ಮುಖ್ಯ ನದಿಗಳು ಶಿಂಷಾ ಮತ್ತು ಜಯಮಂಗಳೀ. ಶಿಂಷಾನದಿ ದೇವರಾಯನದುರ್ಗದಲ್ಲಿ ಹುಟ್ಟಿ ದಕ್ಷಿಣಾಭಿಮುಖವಾಗಿ ಹರಿದು ಕಾವೇರಿಯನ್ನು ಸೇರುತ್ತದೆ. ಜಯಮಂಗಳಿಯೂ ದೇವರಾಯದುರ್ಗದಲ್ಲಿ ಹುಟ್ಟುವ ನದಿ. ಇದು ವಾಯುವ್ಯಾಭಿಮುಖವಾಗಿ ಸ್ವಲ್ಪ ದೂರ ಹರಿದು ಪಶ್ಚಿಮದ ಮೈದಾನದಲ್ಲಿ ಉತ್ತರಕ್ಕೆ ತಿರುಗಿ ಮುಂದುವರಿದು ಪೆನ್ನಾರ್ ನದಿಯಲ್ಲಿ ಸಂಗಮಿಸುತ್ತದೆ. ರಾಜ್ಯದಲ್ಲಿ ಪೂರ್ವಪಶ್ಚಿಮವಾಗಿ ಹಬ್ಬಿರುವ ಜಲವಿಭಾಗ ರೇಖೆ ಈ ಜಿಲ್ಲೆಯ ಮಧ್ಯದಲ್ಲಿ ಸಾಗಿದೆ. ಇದು ಜಿಲ್ಲೆಯ ಜಲವಿಭಾಗ ರೇಖೆಯಾಗಿಯೂ ಪರಿಣಮಿಸಿದೆ. ಜಿಲ್ಲೆಯಲ್ಲಿ ಶಿಂಷಾ ನದಿಯ ಉದ್ದ (99 ಕಿಮೀ.). ಇದು ತುಮಕೂರು, ಗುಬ್ಬಿ, ತುರುವೇಕೆರೆ ಮತ್ತು ಕುಣಿಗಲ್ ತಾಲ್ಲೂಕುಗಳಲ್ಲಿ ಪ್ರವಹಿಸುತ್ತದೆ. ಜಯಮಂಗಳೀ ನದಿ ಹರಿಯುವ ತಾಲ್ಲೂಕುಗಳು ತುಮಕೂರು, ಕೊರಟಗೆರೆ ಮತ್ತು ಮಧುಗಿರಿ, ತಾಲ್ಲೂಕಿನಲ್ಲಿ ಇದರ ಉದ್ದ (64 ಕಿಮೀ). ಜಿಲ್ಲೆಯ ಇನ್ನೊಂದು ಮುಖ್ಯ ನದಿ ಸುವರ್ಣಮುಖಿ. ಚನ್ನರಾಯನ ದುರ್ಗದಲ್ಲಿ ಹುಟ್ಟುವ ಈ ನದಿ ಕೊರಟಗೆರೆ ತಾಲ್ಲೂಕಿನಲ್ಲಿ ಹರಿಯುತ್ತದೆ. ಜಿಲ್ಲೆಯಲ್ಲಿ ಇದರ ಉದ್ದ (24 ಕಿ.ಮೀ) ದೇವರಾಯ ದುರ್ಗದಲ್ಲಿ ಹುಟ್ಟಿ ಕೊರಟಗರೆ ತಾಲ್ಲೂಕಿನಲ್ಲಿ ಹರಿಯುವ ಗರುಡಾ ಚಲವೂ ಚನ್ನಕೇಶವ ಬೆಟ್ಟದಲ್ಲಿ ಹುಟ್ಟಿ ಪಾವಗಡ ತಾಲ್ಲೂಕಿನಲ್ಲಿ ಪ್ರವಹಿಸುವ ಉತ್ತರ ಪಿನಾಕಿನಿಯೂ ಇನ್ನೆರಡು ನದಿಗಳು.

  	ವಾಯುಗುಣ : ಜಿಲ್ಲೆಯ ಅತ್ಯಂತ ಉತ್ತರದ ಭಾಗ ಬಿಟ್ಟು ಉಳಿದ ಭಾಗದ ವಾಯುಗುಣ ಬೆಂಗಳೂರು ಜಿಲ್ಲೆಯದರಂತೆ ಹಿತಕರವಾಗಿರುತ್ತದೆ. ಶಿರಾದಿಂದ ಉತ್ತರಕ್ಕಿರುವ ಪ್ರದೇಶದ ಹಾಗೂ ಪಾವಗಡದ ವಾಯುಗುಣ ಚಿತ್ರದುರ್ಗ ಜಿಲ್ಲೆಯನ್ನು ಹೋಲುತ್ತವೆ. ಅಲ್ಲಿ ಬೇಸಗೆಯಲ್ಲಿ ಹೆಚ್ಚು ಸೆಕೆ. ಜಿಲ್ಲೆಯಲ್ಲಿ ಮಾರ್ಚ್‍ನಿಂದ ಮೇ ವರೆಗೆ ಉಷ್ಣತೆ ಅಧಿಕ. ಏಪ್ರಿಲ್ ಅತ್ಯಂತ ಬಿಸಿಯ ತಿಂಗಳು. ಕೆಲವು ವೇಳೆ 410 ಅ ವರೆಗೂ (1060 ಈ) ಉಷ್ಣತೆ ಏರುವುದುಂಟು. ಜೂನ್‍ನಲ್ಲಿ ಮುಂಗಾರು ಮುಂದುವರಿದಂತೆ ಉಷ್ಣತೆ ಇಳಿಯುತ್ತದೆ. ಅಕ್ಟೋಬರ್‍ನಿಂದ ಗಮನಾರ್ಹವಾಗಿ ಉಷ್ಣತೆ ಇಳಿಯುತ್ತದೆ. ಡಿಸೆಂಬರ್ ಅತ್ಯಂತ ತಂಪಿನ ತಿಂಗಳು. ಚಳಿಗಾಲದಲ್ಲಿ ದೈನಿಕ ಕನಿಷ್ಠ ಉಷ್ಣತೆ ಕೆಲವು ವೇಳೆ 90 ಅ (480 ಅ) ಗೂ ಇಳಿಯುವುದುಂಟು.

  	ಜಿಲ್ಲೆಯಲ್ಲಿ ಡಿಸೆಂಬರ್‍ನಿಂದ ಫೆಬ್ರುವರಿಯ ವರೆಗೆ ಒಣ ಹವೆಯಿರುತ್ತದೆ. ಮಾರ್ಚ್ ನಿಂದ ಮೇ ವರೆಗೆ ಬೇಸಗೆ ಜೂನ್, -ಸೆಪ್ಟೆಂಬರ್ ಮುಂಗಾರಿನ ಕಾಲ. ಅಕ್ಟೋಬರ್-ನವೆಂಬರ್‍ಗಳಲ್ಲಿ ಹಿಂಗಾರು. ಮೇ-ನವೆಂಬರ್ ಅವಧಿಯಲ್ಲೇ ಮಳೆ ವಿಶೇಷ. ಮುಂಗಾರಿನ ಅನಂತರ-ಅಕ್ಟೋಬರ್ ತಿಂಗಳಲ್ಲಿ ಅತ್ಯಂತ ಹೆಚ್ಚಿನ ಮಳೆಯಾಗುತ್ತದೆ. (ಒಟ್ಟು ವಾರ್ಷಿಕ ಮಳೆಯ ಸೇ. 28). ಜಿಲ್ಲೆಯ ವಾರ್ಷಿಕ ಸರಾಸರಿ ಮಳೆ 687.9 ಮಿಮೀ. (27.08"). ಉತ್ತರದಿಂದ ದಕ್ಷಿಣಕ್ಕೆ ಸಾಗಿದಂತೆ ಸಾಮಾನ್ಯವಾಗಿ ಮಳೆ ಹೆಚ್ಚು. ಜಿಲ್ಲೆಯ ಪಶ್ಚಿಮಭಾಗದಲ್ಲಿ ಪಶ್ಚಿಮಕ್ಕಿಂತ ಪೂರ್ವದಲ್ಲಿ ಹೆಚ್ಚು ಮಳೆಯಾಗುತ್ತದೆ.

   	ಸಸ್ಯಪ್ರಾಣಿವರ್ಗ : ಇಲ್ಲಿಯ ನೈಸರ್ಗಿಕ ಸಸ್ಯವರ್ಗ ಶುಷ್ಕ ಪರ್ಣಪಾತಿ ಪ್ರರೂಪಿ. ಬೆಟ್ಟಗಳ ಇಳಿಜಾರು ಪ್ರದೇಶಗಳಲ್ಲಿ ಅರಣ್ಯಗಳಿವೆ. ಜಿಲ್ಲೆಯಲ್ಲಿರುವ ಅರಣ್ಯಗಳ ವಿಸ್ತೀರ್ಣ ಒಟ್ಟು ನೆಲದ ಸೇ. 8ರಷ್ಟು ಮಾತ್ರ. ಹೆಚ್ಚು ಮಳೆಯಾಗುವ ಪ್ರದೇಶದಲ್ಲಿ ಜಾಲರಿ, ದಿಂಡಿಗ, ಹೊನ್ನೆ, ಕರೀಮತ್ತಿ, ಅಳಲೆ, ತೋರ ಮತ್ತಿ, ಹುಣಿಸೆ, ತೇಗ, ಶ್ರೀಗಂಧ, ಬಾಗೆ, ಚಿಲಕಧೂಪ ಮುಂತಾದ ಮರಗಳೂ ಕಡಿಮೆ ಮಳೆಯಾಗುವ ಪಾವಗಡ ಮತ್ತು ಜಿಲ್ಲೆಯ ಉತ್ತರ ಭಾಗಗಳಲ್ಲಿ ಕಗ್ಗಲಿ, ಕಾರೆ, ಕಕ್ಕೆ, ಚುಜ್ಜಲು ಮುಂತಾದ ಮರಗಳೂ ಬೆಳೆಯುತ್ತವೆ. ತಂಗಡಿ ಮತು, ಕಕ್ಕೆ ಮರಗಳು ಜಿಲ್ಲೆಯ ಎಲ್ಲೆಡೆಗಳಲ್ಲೂ ಕಾಣಸಿಗುತ್ತವೆ. ಇವೂ ಅಳಲೆ, ಹುಣಿಸೆ, ಸೀತಾಫಲಗಳು ವರಮಾನ ಸಂಪಾದನೆಯ ದೃಷ್ಟಿಯಿಂದ ಮುಖ್ಯವಾದವು. ಜಿಲ್ಲೆಯಲ್ಲಿ ಅರಣ್ಯಗಳು ಹೆಚ್ಚಾಗಿಲ್ಲದಿದ್ದರಿಂದ ವನ್ಯಮೃಗಗಳು ಹೆಚ್ಚಾಗಿಲ್ಲ. ಹುಲಿ, ಚಿರತೆ ಮುಂತಾದವು ಹಿಂದೆ ಇದ್ದುವು. ಈಗ ಕರಡಿ, ಕಾಡುಹಂದಿ ಮುಂತಾದವು ವಿರಳವಾಗಿ ಇವೆ. ಶಿರಾ ಮತ್ತು ಮಧುಗಿರಿ ತಾಲ್ಲೂಕುಗಳ ಕಾಡುಗಳಲ್ಲಿ ಜಿಂಕೆಗಳ ಸಣ್ಣ ಸಣ್ಣ ಗುಂಪುಗಳಿವೆ.

  	ಪಕ್ಷಿಗಳಲ್ಲಿ ಕಾಡುಕೋಳಿಗಳು ಸಾಮಾನ್ಯ. ನವಿಲು ಒಮ್ಮೊಮ್ಮೆ ಕಾಣಸಿಗುತ್ತದೆ. ಇಲ್ಲಿಯ ನೀರು ತಾಣಗಳಿಗೆ ವರ್ಷದ ಕೆಲವು ತಿಂಗಳುಗಳಲ್ಲಿ ಬಾತುಕೋಳಿಗಳೂ ದಾಸಗೋರೆಗಳೂ ಭೇಟಿ ನೀಡುತ್ತವೆ. ಜಿಲ್ಲೆಯಲ್ಲಿ ಮುಂಗುಸಿಗಳೂ ಮೊಲಗಳು ಹೇರಳವಾಗಿವೆ. ವಿಷಪೂರಿತ ಹಾಗೂ ವಿಷರಹಿತ ಹಾವುಗಳು ಜಿಲ್ಲೆಯಲ್ಲೆಲ್ಲ ಇವೆ.

  	ಖನಿಜ ಸಂಪತ್ತು : ಕುಣಿಗಲ್ ತಾಲ್ಲೂಕಿನ ಹುಲಿಯೂರು ಮತ್ತು ಹೊನ್ನಮಾಚನಹಳ್ಳಿ ಕೆರೆಯ ಬಳಿ ಅಸ್ಬೆಸ್ಟಾಸ್ ನಿಕ್ಷೇಪಗಳಿವೆ. ಕೊರಟಗೆರೆ, ಹುಲಿಯೂರುದುರ್ಗ, ಪಾವಗಡ ತಾಲ್ಲೂಕಿನ ಪಲವಳ್ಳಿ, ಕುಣಿಗಲ್ ತಾಲ್ಲೂಕಿನ ತಿಮ್ಮಸಂದ್ರಗಳಲ್ಲಿ ಕುರಂದ ದೊರಕುತ್ತವೆ. ಜಾನೆಹಾರ್, ಹೊನ್ನೆಬಾಗಿ, ದೋರೆಗುಡ್ಡ, ಕರೆಕುರ್ಚಿ, ಹತ್ಯಾಲ, ಶಿವಸಂದ್ರ, ಕೊಂಡಿ, ಕುದುರೆಕಣಿವೆ ಪ್ರದೇಶಗಳಲ್ಲಿ ಮ್ಯಾಂಗನೀಸ್ ಗಣಿಗಳುಂಟು. ಕೆಲವು ಮ್ಯಾಂಗನೀಸ್ ಗಣಿಗಳಲ್ಲಿ ಸಿಗುವ ಇನ್ನೊಂದು ಖನಿಜವೆಂದರೆ ಮೃದುವಾದ ಜೇಡಿಮಣ್ಣು, ಬೆಳ್ಳಾರ, ಅಜ್ಜನಹಳ್ಳಿಗಳ ಬಳಿ ಚಿನ್ನದ ನಿಕ್ಷೇಪಗಳಿವೆ. ಜಿಲ್ಲೆಯ ಇತರ ಖನಿಜಗಳು ಫೆಲ್ಡ್‍ಸ್ಟಾರ್, ಸುಣ್ಣಕಲ್ಲು, ಕ್ವಾಟ್ರ್ಸ, ಕಟ್ಟಡಕಲ್ಲು.

  	ವ್ಯವಸಾಯ, ನೀರಾವರಿ : ಜಿಲ್ಲೆಯ 21,11,134 ಎಕರೆ ನೆಲದಲ್ಲಿ ಸಾಗುವಳಿ ಒಳಪಟ್ಟು ನೆಲ 12,00,458 ಎಕರೆ (1965-66) ; 3,22,394 ಎಕರೆ ಬೀಳು ಬಿದ್ದಿತ್ತು. ಸಾಗುವಳಿ ನೆಲ ತುಮಕೂರು, ತಿಪಟೂರು, ಪಾವಗಡ, ಶಿರಾ ಮತ್ತು ಗುಬ್ಬಿ ತಾಲ್ಲೂಕುಗಳಲ್ಲಿ ಇತರ ತಾಲ್ಲೂಕುಗಳಲ್ಲಿಯದಕ್ಕಿಂತ ಅಧಿಕ. ಕಾಡಿನ ಪ್ರದೇಶ 1,08,172 ಎಕರೆ. ಶಿರಾ, ಗುಬ್ಬಿ, ಪಾವಗಡ, ಕುಣಿಗಲ್, ಚಿಕ್ಕನಾಯಕನಹಳ್ಳಿ ತಾಲ್ಲೂಕುಗಳಲ್ಲಿ ಕಾಡುಗಳ ಪ್ರದೇಶ ಹೆಚ್ಚು. 

  	ಜಿಲ್ಲೆಯ ಮಣ್ಣು ಸಾಮಾನ್ಯವಾಗಿ ಗಟ್ಟಿ, ಅಷ್ಟೇನೂ ಫಲವತ್ತಾದ್ದಲ್ಲ. ಕೆರೆ ನಾಲೆಗಳಿಂದ ನೀರಾವರಿಗೆ ಒಳಪಟ್ಟು ನೆಲ ಮಾತ್ರ ಉತ್ತಮ. ಜಿಲ್ಲೆಯ ದಕ್ಷಿಣ ಪಶ್ಚಿಮ ತಾಲ್ಲೂಕುಗಳದು ಸಾಮಾನ್ಯವಾಗಿ ಕೆಂಪು ಮಣ್ಣು (ರಾಗಿ ಮಣ್ಣು). ಉತ್ತರದ ತಾಲ್ಲೂಕುಗಳಲ್ಲಿ ತಕ್ಕಮಟ್ಟಿಗೆ ಕಪ್ಪು ಮಣ್ಣು ಇದೆ. ಪೂರ್ವದ ತಾಲ್ಲೂಕುಗಳಲ್ಲಿ ಮರಳು ಮಣ್ಣು ಸಾಮಾನ್ಯ. ಒಟ್ಟಿನಲ್ಲಿ ಜಿಲ್ಲೆಯ ಮಣ್ಣನ್ನು ಕೆಂಪು, ಗರಸು, ಮರಳು, ಜೇಡಿ ಕಪ್ಟು, ಮರಳುಜೇಡಿ-ಎಂದು ವಿಂಗಡಿಸಬಹುದು. ಜಿಲ್ಲೆಯ ಮುಖ್ಯ ಬೆಳೆಗಳು ರಾಗಿ, ಬತ್ತ, ಜೋಳ, ಹುರುಳಿ, ನೆಲಗಡಲೆ, ಮೆಣಸಿನಕಾಯಿ, ಕಬ್ಬು, ತೆಂಗು, ಅಡಿಕೆ, ಬಾಳೆ ಎಣ್ಣೆ ಬೀಜಗಳು. ಚಿಕ್ಕನಾಯಕನಹಳ್ಳಿ ಗುಬ್ಬಿ, ತಿಪಟೂರು ತಾಲ್ಲೂಕುಗಳಲ್ಲಿ ತೆಂಗು ಮತ್ತು ಅಡಿಕೆ ಬೆಳೆ ಅಧಿಕ. ಕೊಪಟಗೆರೆ ತಾಲ್ಲೂಕು ಅಗ್ರಹಾರದಲ್ಲಿ ಬಜೆ ಮೂಲಿಕೆ ಬೆಳೆಯುತ್ತಾರೆ. ಹಲಸು, ಮಾವು ಇನ್ನೆರಡು ಫಸಲುಗಳು.

  	ಜಿಲ್ಲೆಯ ಮುಖ್ಯ ಜಲಾಶಯಗಳು ಇವು : 1 ಕುಣಿಗಲ್ ತಾಲ್ಲೂಕು ಅಮೃತೂರಿನ ಮಾರ್ಕೋನಹಳ್ಳಿ ಜಲಾಶಯ (ಶಿಂಷಾ) ; 2 ಚಿಕ್ಕನಾಯಕನ ಹಳ್ಳಿ ತಾಲ್ಲೂಕು ಬೋರನ ಕಣಿವೆ ಜಲಾಶಯ (ಸುವರ್ಣಮುಖಿ) ; 3 ಕುಣಿಗಲ್ ತಾಲ್ಲೂಕು ಸಂಕನಪುರ ಅಣೆಕಟ್ಟು (ನಾಗಿನಿ) ; 4 ಮಾಗಡಿ ಕೆಂಪೇಗೌಡ ಕಟ್ಟಿಸಿದ ದೀಪಾಂಬುಧಿ ಕೆರೆ ಮತ್ತು 5 ಕುಣಿಗಲ್ ತಾಲ್ಲೂಕು ಮಂಗಳ ಗ್ರಾಮದ ಬಳಿ ನಾಗಿನಿ ಜಲಾಶಯ. ಅನೇಕ ಕೆರೆಗಳೂ ತಲಪರಿಗೆಗಳೂ (ತೊರೆಗಳಲ್ಲಿ ತೋಡಿದ ಊಟೆಗಳು) ನೀರಾವರಿಗೆ ಉಪಯುಕ್ತವಾಗಿವೆ.

ಕೈಗಾರಿಕೆ : ಅಜ್ಜನಹಳ್ಳಿ ಮತ್ತು ಬೆಳ್ಳಾರ ಹಳ್ಳಿಗಳ ಬಳಿಯ ಚಿನ್ನದ ಗಣಿಗಾರಿಕೆ ಪ್ರಯತ್ನಗಳನ್ನು ಬಿಟ್ಟರೆ ಈ ಜಿಲ್ಲೆಯಲ್ಲಿ ಯಾವ ಹಳೆಯ ದೊಡ್ಡ ಕೈಗಾರಿಕೆಗಳೂ ಇದ್ದಂತಿಲ್ಲ. ಹಲವು ಗುಡಿಸಿಲು ಕೈಗಾರಿಕೆಗಳು ಪ್ರಾಚೀನವಾದವು. ಇವುಗಳ ಬೇಡಿಕೆ ಹಾಗೂ ಕಚ್ಚಾಸಾಮಗ್ರಿ ಪೂರೈಕೆ ಸ್ಥಳೀಯ. ಚಿಕ್ಕನಾಯಕನ ಹಳ್ಳಿಯ ಉಜ್ಜುಕಂಬಳಿ ತುಂಬ ಪ್ರಸಿದ್ಧವಾದ್ದು. ಜಿಲ್ಲೆಯ ಹಲವು ಕಡೆಗಳಲ್ಲಿ ದುಪ್ಪಟಿಗಳು ತಯಾರಾಗುತ್ತಿದ್ದವು. ಇತರ ಗುಡಿಸಿಲು ಕೈಗಾರಿಕೆಗಳು ಮಡಿಕೆ, ಮರಗೆಲಸ, ಎಣ್ಣೆಗಾಣ, ಹಿಂಡಿ, ಬಾಚಣಿಗೆ ಮತ್ತು ಬಳೆ. ಬೆಳ್ಳಾರದಲ್ಲಿ ಚಿನ್ನ ತೆಗೆಯುವ ಉದ್ಯಮ ಅಷ್ಟೇನೂ ಲಾಭದಾಯಕವಲ್ಲದಿದ್ದರಿಂದ ಅದನ್ನು ಕೈಬಿಡಲಾಯಿತು. ಮರಕೊಯ್ತ, ವ್ಯವಸಾಯ ಉಪಕರಣ ತಯಾರಿಕೆ, ಮೋಟಾರು ವಾಹನಗಳ ಒಡಲಿನ ನಿರ್ಮಾಣ, ಬೆಂಕಿಕಡ್ಡಿ ತಯಾರಿಕೆ, ಮೋಟಾರು ವಾಹನಗಳ ಒಡಲಿನ ನಿರ್ಮಾಣ , ಬೆಂಕಿಕಡ್ಡಿ ತಯಾರಿಕೆ, ಪಾತ್ರೆ ಹಾಗೂ ಸಾಬೂನು ತಯಾರಿಕೆ, ಹೆಂಚು ಇಟ್ಟಿಗೆ ತಯಾರಿಕೆ ಬೀಡಿ ತಯಾರಿಕೆ, ನೇಯ್ಗೆ, ರೇಷ್ಮೆ, ಚರ್ಮ ಹದಗಾರಿಕೆ-ಇವು ಕೆಲವು ಆಧುನಿಕ ಸಣ್ಣ ಕೈಗಾರಿಕೆಗಳು. ತುರುವೇಕೆರೆ ತಾಲ್ಲೂಕಿನ ಅಮ್ಮಸಂದ್ರದಲ್ಲಿ ದೊಡ್ಡ ಸಿಮೆಂಟ್ ಕಾರ್ಖಾನೆ ಇದೆ.

	ಸಾರಿಗೆ ಸಂಪರ್ಕ: ಬೆಂಗಳೂರು-ಅರಸೀಕೆರೆ ರೈಲುಮಾರ್ಗ ಜಿಲ್ಲೆಯಲ್ಲಿ ಪೂರ್ವದಿಂದ ಪಶ್ಚಿಮಕ್ಕೆ (94ಕಿಮೀ.) ಸಾಗಿದೆ. ಜಿಲ್ಲೆಯ ರೈಲ್ವೆ ನಿಲ್ದಾಣಗಳು ಹಿರೇಹಳ್ಳಿ, ತುಮಕೂರು, ಗುಬ್ಬಿ, ನಿಟ್ಟೂರು, ಯಲ್ಲದ ಬಾಗಿ ಬಾಣಸಂದ್ರ, ಕರಡಿ, ತಿಪಟೂರು ಮತ್ತು ಕೊನೇಹಳ್ಳಿ, ಜಿಲ್ಲೆಯ ರಸ್ತೆಗಳ ಒಟ್ಟು ಉದ್ದ (2.590 ಕಿಮೀ.) ಇದರಲ್ಲಿ ರಾಷ್ಟ್ರೀಯ ಹೆದ್ದಾರಿ; ರಾಜ್ಯ ಹೆದ್ದಾರಿ, ಜಿಲ್ಲೆಯಲ್ಲಿ ಹಾದುಹೋಗುವ ಪ್ರಮುಖ ರಸ್ತೆಗಳು ಬೆಂಗಳೂರು ಪುಣೆ ರಾಷ್ಟ್ರೀಯ ಹೆದ್ದಾರಿ (ಹಿರೇಹಳ್ಳಿಯಿಂದ ಸಿರಾ ತಾಲ್ಲೂಕಿನ ನಾರಾಯಣಪುರದ ವರೆಗೆ) ; ಬೆಂಗಳೂರು-ಹೊನ್ನಾವರ ರಸ್ತೆ ಬೆಂಗಳೂರು-ಮಂಗಳೂರು ರಸ್ತೆ, ತುಮಕೂರು-ಬಳ್ಳಾರಿ ರಸ್ತೆ, ತುಮಕೂರು-ಕುಣಿಗಲ್-ಮದ್ದೂರು ರಸ್ತೆ, ಪಾವಗಡ-ಅರಸೀಕೆರೆ ರಸ್ತೆ.

	ಪ್ರಮುಖ ಸ್ಥಳಗಳು: ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳು ಕೈದಾಳ, ಸಿದ್ಧಗಂಗೆ ಮತ್ತು ದೇವರಾಯನದುರ್ಗ, ಪಾಳೆಯಗಾರರ ಕೋಟೆಗಳು ಮಧುಗಿರಿ, ಮಿಡಿಗೇಸಿ, ಪಾವಗಡ, ನಿಡುಗಲ್, ಕೊರಟಗೆರೆ, ಹುತ್ರಿದುರ್ಗ ಮತ್ತು ಶಿರಾಗಳಲ್ಲಿವೆ.	

	ಆಡಳಿತ ವಿಭಾಗ: ಜಿಲ್ಲೆಯಲ್ಲಿ 3 ರೆವಿನ್ಯೂ ಉಪವಿಭಾಗಗಳೂ ಅವಕ್ಕೆ ಸೇರಿದ 10 ರೆವಿನ್ಯೂ ತಾಲ್ಲೂಕುಗಳೂ 50 ಹೋಬಳಿಗಳೂ 2.452 ಗ್ರಾಮಗಳೂ ಇವೆ. ತುಮಕೂರು ಉಪವಿಭಾಗಕ್ಕೆ ತುಮಕೂರು, ಗುಬ್ಬಿ ಕುಣಿಗಲ್ ತಾಲ್ಲೂಕುಗಳೂ ತಿಪಟೂರು ಉಪವಿಭಾಗಕ್ಕೆ ತಿಪಟೂರು, ಚಿಕ್ಕನಾಯಕನಹಳ್ಳಿ, ತುರುವೇಕೆರೆ ತಾಲ್ಲೂಕುಗಳೂ ಮಧುಗಿರಿ ಉಪವಿಭಾಗಕ್ಕೆ ಮಧುಗಿರಿ, ಶಿರಾ ಕೊರಟಗೆರೆ, ಪಾವಗಡ ತಾಲ್ಲೂಕುಗಳೂ ಸೇರಿವೆ. ಜಿಲ್ಲೆಯಲ್ಲಿ 560 ಗ್ರಾಮಪಂಚಾಯಿತಿಗಳಿವೆ; ಪುರಸಭೆಗಳು 11. 

	ತುಮಕೂರು ತಾಲ್ಲೂಕು: ತುಮಕೂರು ಉಪವಿಭಾಗಕ್ಕೆ ಸೇರಿದ ತಾಲ್ಲೂಕು ಎಲ್ಲೆಗಳು; ಉತ್ತರಕ್ಕೆ ಶಿರಾ ಮತ್ತು ಕೊರಟಗೆರೆ, ಪಶ್ಚಿಮಕ್ಕೆ ಗುಬ್ಬಿ, ದಕ್ಷಿಣಕ್ಕೆ ಕುಣಿಗಲ್, ಆಗ್ನೇಯಕ್ಕೆ ಬೆಂಗಳೂರು ಜಿಲ್ಲೆಯ ಮಾಗಡಿ, ಪೂರ್ವಕ್ಕೆ ನೆಲಮಂಗಲ ತಾಲ್ಲೂಕುಗಳು. ವಿಸ್ತೀರ್ಣ 1.018 ಚ.ಕಿಮೀ. ಜನಸಂಖ್ಯೆ 5,15,601 (2001). ತಾಲ್ಲೂಕಿನ ಹೋಬಳಿಗಳು ತುಮಕೂರು, ಹೆಬ್ಬೂರು, ಕೋರ, ಗೂಳೂರು, ಬೆಳ್ಳಾವೆ ಮತ್ತು ಉದ್ದಗೆರೆ, ತಾಲ್ಲೂಕಿನ ಸರಾಸರಿ ಇತ್ತರ ಸಮುದ್ರಮಟ್ಟದಿಂದ 2.660 ಅಡಿ. ವಾರ್ಷಿಕ ಸರಾಸರಿ, ಮಳೆ 27''. ಉಷ್ಣತೆ ಜನವರಿಯಲ್ಲಿ 900ಈ , ಡಿಸೆಂಬರ್‍ನಲ್ಲಿ 870ಈ ತಾಲ್ಲೂಕಿನಲ್ಲಿ ಬೆಟ್ಟಗುಡ್ಡಗಳು ಹಾಗೂ ಅರಣ್ಯಗಳಿದ್ದರೂ ಅನೇಕ ಕಡೆ ಫಲವತ್ತಾದ ಕೆಂಪುಮಣ್ಣಿನ ಭೂಮಿ ಇದೆ. ಪ್ರಮುಖ ಬೆಟ್ಟಗಳು ದೇವರಾಯದುರ್ಗ, ನಿಜಗಲ್, ರಾಮದೇವರ ಬೆಟ್ಟ ಮತ್ತು ಸೀತಕಲ್ ಬೆಟ್ಟ. ದೇವರಾಯ ದುರ್ಗ ಹಾಗೂ ದೊಡ್ಡವಾಡಿ ಬೆಟ್ಟದಲ್ಲಿ ಕಾಡುಗಳಿವೆ. ಚಿರತೆ, ಕರಡಿ, ನರಿ, ಕಾಡುಹಂದಿ, ಕಾಡು ಪಾರಿವಾಳ ಜೀವಂಜೀವ ಮತ್ತು ಇತರ ಪಕ್ಷಿಗಳಿವೆ. ಹಲಸಿನ ಹಾಗೂ ಮಾವಿನ ಮರಗಳು ಹೆಚ್ಚು. ದೇವರಾಯದುರ್ಗದ ಉತ್ತರದಲ್ಲಿ ಜಯಮಂಗಲಿ ನದಿ ಹುಟ್ಟಿ ತಾಲ್ಲೂಕಿನಲ್ಲಿ 8 ಮೈ. ಹರಿದು ಮುಂದೆ ಕೊರಟಗೆರೆ, ಮಧುಗಿರಿ ತಾಲ್ಲೂಕುಗಳಲ್ಲಿ ಹರಿಯುತ್ತದೆ. ಈ ದುರ್ಗದ ದಕ್ಷಿಣದಲ್ಲಿ ಹುಟ್ಟುವ ನದಿಗಳು ಶಿಂಷಾ ಮತ್ತು ಗರುಡಾಚಲ, ಶಿಂಷಾ ನದಿ ತಾಲ್ಲೂಕಿನಲ್ಲಿ 17.5 ಮೈ. ದೂರ ಹರಿದು ದಕ್ಷಿಣಾಭಿಮುಖವಾಗಿ ಮಂಡ್ಯ ಜಿಲ್ಲೆಯತ್ತ ಸಾಗುತ್ತದೆ.

	ತಾಲ್ಲೂಕಿನ ಮುಖ್ಯ ಬೆಳೆಗಳು ತೆಂಗು, ಅಡಕೆ, ರಾಗಿ, ಬತ್ತ, ಕಬ್ಬು, ನೆಲಗಡಲೆ, ಅವರೆ ಮೊದಲಾದ ದ್ವಿದಳಧಾನ್ಯಗಳು ಮತ್ತು ಮೆಣಸಿನಕಾಯಿ. ನೀರಾವರಿ ಹೆಚ್ಚಾಗಿ ಕೆರೆ ಮತ್ತು ತಲಪರಿಗೆಗಳಿಂದ, ತಾಲ್ಲೂಕಿನಲ್ಲಿ ಕೈಗಾರಿಕೆಗಳು ಇತ್ತಿಚೆಗೆ ವೃದ್ಧಿಹೊಂದುತ್ತಿವೆ. ಹಿಂದಿನ ಕಾಲದಿಂದ ಪ್ರಸಿದ್ಧವಾಗಿರುವ ಕೈಗಾರಿಕೆಗಳು ಕಲ್ಲುಹಲಗೆ, ಬಳಪ, ಬಾಚಣಿಗೆ ಮತ್ತು ಇಟ್ಟಿಗೆ ತಯಾರಿಕೆ. ತುಮಕೂರು ತಾಲ್ಲೂಕಿನಲ್ಲಿ ರೇಷ್ಮೆಹುಳುಗಳನ್ನು ಕೆಲವು ಕಡೆ ಸಾಕುತ್ತಾರೆ. ರೇಷ್ಮೆ ವಸ್ತ್ರಗಳ ನೇಯ್ಗೆಯೂ ಒಂದು ಮುಖ್ಯ ಕಸಬು. ತಾಲ್ಲೂಕಿನ ಹೆಗ್ಗೆರೆ ಗ್ರಾಮದಲ್ಲಿ ಚರ್ಮ ಹದ ಮಾಡಲಾಗುತ್ತದೆ. ತಾಲ್ಲೂಕಿನ ಸಾತಘಟ್ಟ ಮತ್ತು ಸೀತಕಲ್ ಹಿತ್ತಾಳೆ ಮತ್ತು ಕಂಚಿನ ಸಾಮಾನುಗಳ ತಯಾರಿಕೆಗೆ ಪ್ರಸಿದ್ಧಿ ತಾಲ್ಲೂಕಿನಲ್ಲಿ ಬೆಂಗಳೂರು-ಅರಸೀಕೆರೆ ರೈಲುಮಾರ್ಗ (ಮೀಟರ್ ಗೇಜ್) ಪೂರ್ವದಿಂದ ಪಶ್ಚಿಮಕ್ಕೆ ಹಾದುಹೋಗುತ್ತದೆ. ತುಮಕೂರು ರೈಲ್ವೆನಿಲ್ದಾಣ.

	ತುಮಕೂರು ಪಟ್ಟಣ : ಜಿಲ್ಲೆಯ ಆಡಳಿತ ಕೇಂದ್ರ. ಉ.ಅ. 1130 20' ಮತ್ತು ಪೂರೇ. 710 9 ಮೇಲೆ, ಬೆಂಗಳೂರಿನ ವಾಯುವ್ಯಕ್ಕೆ 43 ಮೈ. (69 ಕಿಮೀ.) ದೂರದಲ್ಲಿ ಇದೆ. ಜನಸಂಖ್ಯೆ 2,48,592 (2001).

	ಹಿಂದೆ ತುಮಕೂರು ಕ್ರೀಡಾಪುರದ (ಕೈದಾಳ) ಅರಸನಿಗೆ ಸೇರಿತ್ತು. ಕ್ರೀಡಾಪುರದ ರಾಜ ಈ ಊರನ್ನು ತುಮಕು (ಡೋಲು) ಬಾರಿಸುವವರಿಗೆ ಕೊಟ್ಟನೆಂದೂ ಆದ್ದರಿಂದ ಇದಕ್ಕೆ ತುಮಕೂರು ಎಂಬ ಹೆಸರಾಯಿತೆಂದೂ ಹೇಳುತ್ತಾರೆ. 10ನೆಯ ಶತಮಾನದ ಶಾಸನವೊಂದರಿಂದ, ಈ ಸ್ಥಳಕ್ಕೆ ತುಮಗೂರು (ತುಂಬೆ ಊರು) ಎಂಬ ಹೆಸರಿದ್ದಿತೆಂದು ತಿಳಿದು ಬರುತ್ತದೆ. ಹಿಂದೆ ಇದು ಆನೇಬಿದ್ದ ಜರಿ ಪ್ರಾಂತ್ಯಕ್ಕೆ ಸೇರಿತ್ತು. ಮೈಸೂರು ರಾಜವಂಶದ ಕುಂಟೇ ಅರಸು ತುಮಕೂರಿನ ಕೋಟೆಯನ್ನು ಕಟ್ಟಿಸಿದ. ಈಗ ಕೋಟೆಯ ಭಾಗ ನೆಲಸಮವಾಗಿದೆ.

	ತುಮಕೂರಿನ ಪಕ್ಕದಲ್ಲಿರುವ ಮೈದಾಳ ಕೆರೆಯಿಂದ ಪಟ್ಟಣಕ್ಕೆ ನೀರು ಸರಬರಾಜಾಗುತ್ತದೆ. ಸಂತೆಪೇಟೆ, ಅರಳೀಪೇಟೆ, ರ್ಪೆಷನ್ ಮೊಹಲ್ಲಾ ಮತ್ತು ಮಂಡೀಪೇಟೆ, ಗಾಂಧಿನಗರ, ಸೋಮೇಶ್ವರ ಮತ್ತು ಕೃಷ್ಣರಾಜೇಂದ್ರ ಬಡಾವಣೆಗಳು ಪಟ್ಟಣದ ಪ್ರಮುಖ ಭಾಗಗಳು. ತುಮಕೂರಿನಲ್ಲಿ ಪುರಭವನ, ಸರ್ಕಾರಿ ಪ್ರೌಢಶಾಲೆ, ಕಾಲೇಜುಗಳು, ಸಾರ್ವತ್ರಿಕ ಆಸ್ಪತ್ರೆ, ಸಾರ್ವಜನಿಕ ಗ್ರಂಥಾಲಯ, ಜಿಲ್ಲಾಧಿಕಾರಿಯ ನಿವಾಸವಾದ ದಾಬಸ್ ಬಂಗಲೆ, ಜಿಲ್ಲಾ ಕಚೇರಿ ಹಾಗೂ ಇತರ ಕಚೇರಿಗಳು, ಜಿಲ್ಲಾ ಮತ್ತು ಸೆಷನ್ಸ್ ಕೋರ್ಟು, ಪ್ರಥಮ ದರ್ಜೆಯ ದಂಡಾಧೀಶರ ನ್ಯಾಯಾಲಯ ಹಾಗೂ ಮುನ್ಸೀಪ್ ನ್ಯಾಯಾಲಯ ಇವೆ.

	ತುಮಕೂರು ವಾಣಿಜ್ಯ ಕೇಂದ್ರ. ನಗರದಲ್ಲಿ ದೇವಾಲಯಗಳು, ಮಸೀದಿಗಳು ಮತ್ತು ಚರ್ಚುಗಳು ಇವೆ. ಲಕ್ಷ್ಮೀನಾರಾಯಣ ದೇವಸ್ಥಾನ ಪ್ರಮುಖವಾದ್ದು. ಇದು ಗರ್ಭಗೃಹ, ಸುಖನಾಸಿ, ನವರಂಗ, ಮುಖಮಂಟಪ, ಪ್ರಾಕಾರ ಇವುಗಳಿಂದ ಕೂಡಿದ ದ್ರಾವಿಡ ಶೈಲಿಯ ಮಂದಿರ. ಇದನ್ನು 1560ರಲ್ಲಿ ನಿರ್ಮಿಸಲಾಯಿತು.

	ಪಟ್ಟಣಕ್ಕೆ 16 ಕಿ.ಮೀ ದೂರದಲ್ಲಿ ದೇವರಾಯನದುರ್ಗ ಗಿರಿಧಾಮವಿದೆ. ಇದು ಸಮುದ್ರಮಟ್ಟದಿಂದ ಸು.3.000 ಅಡಿ ಎತ್ತರದಲ್ಲಿದೆ. 24ಮೈ. ದೂರದಲ್ಲಿ ಕುಣಿಗಲ್ ಕುದುರೆ ಸಾಕಣೆ ಕ್ಷೇತ್ರವಿದೆ. ಜಕಣಾಚಾರಿ ಕಟ್ಟಿದನೆನ್ನಲಾದ ಚನ್ನಕೇಶದ ದೇವಾಲಯವಿರುವ ಕೈದಾಳ ತುಮಕೂರಿನಿಂದ 3ಮೈ. ದೂರದಲ್ಲಿದೆ.

	ತುಮಕೂರಿನಿಂದ ಹೊನ್ನಾವರ, ಬಳ್ಳಾರಿ, ತಿಪಟೂರು, ಮಧುಗಿರಿ, ಮದ್ದೂರು ಮೊದಲಾದ ಸ್ಥಳಗಳಿಗೆ ರಸ್ತೆಗಳಿವೆ. ಬೆಂಗಳೂರು-ಅರಸೀಕೆರೆ ರೈಲು ತುಮಕೂರಿನ ಮೂಲಕ ಸಾಗುತ್ತದೆ.                                     (ವಿ.ಜಿ.ಕೆ.)
	ಪ್ರಾಗಿತಿಹಾಸ : ತುಮಕೂರು ಜಿಲ್ಲೆಯ ಎರಡು ನೆಲೆಗಳಲ್ಲಿ ಪೂರ್ವ ಶಿಲಾಯುಗದ ಕಾಲದ ಅವಶೇಷಗಳನ್ನು ಶೋಧಿಸಲಾಗಿದೆ. ತಿಪಟೂರು ತಾಲ್ಲೂಕಿನಲ್ಲಿ ಬಾಣಸಂದ್ರ ಬೆಟ್ಟಗಳ ಇಳಿಜಾರಿನಲ್ಲಿರುವ ಬಿಳಿಗೆರೆ ಗ್ರಾಮದ ಬಳಿ 1924ರಲ್ಲಿ ಕೈಕೊಡಲಿಗಳು, ಬಾಗಿದ ಗರಗಸದಂಥ ಚಕ್ಕೆಗಳು, ಬಾಣದ ಮೊನೆಗಳು, ಉಳಿ ಮುಂತಾದ ಆಯುಧಗಳನ್ನು ಸಂಗ್ರಹಿಸಲಾಯಿತು. ಈ ನೆಲೆ ಪೂರ್ವ ಮತ್ತು ಮಧ್ಯ ಶಿಲಾಯುಗ ಕಾಲದಲ್ಲಿ ಆಯುಧ ತಯಾರಿಕಾ ಕೇಂದ್ರವಾಗಿತ್ತು. ಬಾಣಸಂದ್ರ ರೈಲ್ವೆ ನಿಲ್ದಾಣದಿಂದ 2.5ಮೈ. ದೂರದಲ್ಲಿರುವ ಕಿಬ್ಬನ ಹಳ್ಳಿಯಲ್ಲಿ ಶಿಲಾಯುಗದ ಆಯುಧೋಪಕರಣಗಳು ದೊರಕಿವೆ. ಈಗ ಅಲ್ಲಿ ಯಾವುದೇ ದೊಡ್ಡ ನದಿ ಅಥವಾ ಸರೋವರವಿಲ್ಲದಿದ್ದರೂ ಪೂರ್ವಶಿಲಾಯುಗ ಕಾಲದಲ್ಲಿ ಈ ನೆಲೆ ಮಾನವವಾಸಯೋಗ್ಯವಾಗಿತ್ತು. ಸಮೀಪದ ಕಣಿವೆಯಿಂದ ಅವಶ್ಯವಾದ ನೀರು ದೊರಕುತ್ತಿತ್ತು. ಅಲ್ಲಿಯ ಶಿಲಾಪದರಗಳಲ್ಲಿದ್ದ ಬೆಣಚುಕಲ್ಲಿನ ನಿಕ್ಷೇಪಗಳಲ್ಲಿ ಆಯುಧ ತಯಾರಿಕೆಗೆ ಬೇಕಾದ ಕಲ್ಲುಗಳು ಒದಗುತ್ತಿದ್ದುವು. ಅಲ್ಲಿ ಸಿಕ್ಕಿರುವ ಆಯುಧಗಳನ್ನು ರೋಸ್ಟ್ರೋಕ್ಕಾರಿನೇಟ್, ಒರಟಾದ ಅಬ್ಬೆವಿಲಿಯನ್ ಮತ್ತು ಸುಧಾರಿತ ಅಷ್ಯೂಲಿಯನ್ ಕೈಗೊಡಲಿಗಳು ಎಂದು ವಿಭಾಗಿಸಲಾಗಿದೆ. ಮೊದಲನೆಯ ಗುಂಪಿನವು ಮುಕ್ಕೋಣಾಕಾರವಾಗಿವೆ. ಇವುಗಳ ಒಂದು ತುದಿ ಚೂಪಾಗಿದೆ. ಒರಟಾದರೂ ಸುಲಭ ಪರಿಶ್ರಮದಿಂದ ತಯಾರಿಸಲಾದ ಕೈಗೊಡಲಿಗಳಂಥ ಆಯುಧಗಳು ಇವು. ಎರಡನೆಯ ಗುಂಪಿನವು ದೊಡ್ಡ ಚಕ್ಕೆಗಳನ್ನು ತೆಗೆದು ಅಂಕುಡೊಂಕಾದ ಅಂಚುಗಳುಳ್ಳ ಸಾಮಾನ್ಯವಾಗಿ ಪೇರು ಹಣ್ಣಿನ ಆಕಾರದ ಕೈಗೊಡಲಿಗಳು. ಮೂರನೆಯ ಗುಂಪಿನವು ಸುಧಾರಿತ ತಾಂತ್ರಿಕ ನೈಪುಣ್ಯದಿಂದ ತಯಾರಿಸಿದ, ನೇರವಾದ ಅಂಚುಗಳುಳ್ಳ, ಚೂಪಾದ ಆದರೆ ಬಲವಾದ ತುದಿಗಳುಳ್ಳ, ಪೇರುಹಣ್ಣಿನಂಥ, ಮುಕ್ಕೋಣದ ಅಂಡಾಕಾರದ ಆಕೃತಿಯ ಕೈಗೊಡಲಿಗಳು; ಅವುಗಳೊಂದಿಗೆ ಕಡಿಗತ್ತಿಗಳು (ಕ್ಲೀವರ್) ಮತ್ತು ಚಕ್ಕೆಕಲ್ಲುಗಳಿಂದ ಮಾಡಿದ ಹೆರೆಯುವ ಮತ್ತು ಕೊರೆಯುವ ಆಯುಧಗಳು, ಮೊನೆಗಳು ಬಾಗಿದ ಕೊಕ್ಕಿನಂತೆ ತುದಿಯುಳ್ಳ ಆಯುಧಗಳು; ಚಕ್ರಾಕಾರದ ಅಂಚುಗಳು ತೆಳ್ಳಗೂ ಮಧ್ಯ ಭಾಗ ದಪ್ಪನಾಗಿಯೂ ಇರುವ ಆಯುಧಗಳು. ಮೇಲೆ ಹೇಳಿದ ಆಯುಧಗಳ ತಯಾರಿಕೆಯಲ್ಲಿ ಬಳಸುವ ಫ್ಯಾಬ್ರಿಕೇಟರ್ ಮುಂತಾದವು ಪ್ರಮುಖವಾಗಿವೆ. ಇಲ್ಲಿ ದಕ್ಷಿಣ ಭಾರತದ ಪೂರ್ವಶಿಲಾಯುಗ ಸಂಸ್ಕøತಿಯ ಇತರ ನೆಲೆಗಳಲ್ಲಿ ಕಾಣದ ಕೆಲವು ವಿಶಿಷ್ಟ ರೀತಿಯ ಆಯುಧಗಳು ದೊರಕುವುದರಿಂದ ಇವುಗಳ ಮೂಲದ ಶೋಧ ಮತ್ತು ತೌಲನಿಕ ಅಧ್ಯಯನ ಈ ಘಟ್ಟದಲ್ಲಿ ಕಷ್ಟ.

	ಅನಂತರದ ಕಾಲಕ್ಕೆ ಸೇರಿದ ಸೂಕ್ಷ್ಮಶಿಲಾಯುಗ ಸಂಸ್ಕøತಿಯ ಅವಶೇಷಗಳು ಸಹ ಕಿಬ್ಬನಹಳ್ಳಿಯ ನೆಲೆಯಲ್ಲಿ ದೊರಕುತ್ತವೆ. 1951ರಲ್ಲಿ ಇದನ್ನು ಶೋಧಿಸಲಾಯಿತು. ಆ ಸಂಸ್ಕøತಿಯ ಕಾಲದಲ್ಲೂ ಈ ನೆಲೆ ಒಂದು ದೊಡ್ಡ ತಯಾರಿಕಾ ಕೇಂದ್ರವಾಗಿದ್ದಂತೆ ಕಾಣಬರುತ್ತದೆ. ಬೆಟ್ಟಗಳ ಚಾಚುಗಳಲ್ಲಿ ಇಂಥ ಆಯುಧಗಳೂ ಇವುಗಳ ತಯಾರಿಕೆಯಲ್ಲಿ ಬಳಸಿರುವ ಉತ್ತಮ ಮಟ್ಟದ ಬೆಣಚುಕಲ್ಲಿನ ಹರಳುಗಳೂ ಅಧಿಕ ಸಂಖ್ಯೆಯಲ್ಲಿ ಸಿಗುತ್ತವೆ. ಆಯುಧಗಳಲ್ಲಿ ಹೆಚ್ಚಿನವು ತೆಳು ಚಕ್ಕೆಗಳಿಂದ ಮಾಡಿದ ಹೆರೆಯುವ ಆಯುಧಗಳು, ಮೊನೆಗಳು, ಕೂರಲಗು ಫಲಕಗಳು ಮತ್ತು ಅರ್ಧಚಂದ್ರಾಕೃತಿಯ ಆಯುಧಗಳು (ಲೂನೇಟ್) ಮತ್ತು ಅವುಗಳ ತಯಾರಿಕೆಯಲ್ಲಿ ಬಳಸಿದ ತಿರುಳ್ಗಲ್ಲುಗಳು. ಈ ಆಯುಧಗಳ ರೀತಿಗಳಲ್ಲಿ ಕೆಲವು ವಿಶಿಷ್ಟ ಅಂಶಗಳು ಕಂಡುಬಂದಿವೆ. ಕೆಲವು ಬಾಣದ ಮೊನೆಗಳಿಗೆ ಅಡ್ಡವಾಗಿ ಮುರಿದ ತುದಿಗಳಿವೆ. ಮತ್ತೆ ಕೆಲವಕ್ಕೆ ಒಂದಂಚನ್ನು ಮೊಂಡುಗೊಳಿಸಿದ್ದರೆ ಇನ್ನು ಕೆಲವಕ್ಕೆ ಬುಡದಲ್ಲಿ ಹಿಡಿಕೆಯಲ್ಲಿ ಸೇರಿಸಿ ಕಟ್ಟಲು ಅನುಕೂಲವಾಗುವಂತೆ ಚಾಚಿಕೊಂಡಿರುವ ತುದಿಯನ್ನು (ಟ್ಯಾಂಗ್) ಮಾಡಲಾಗಿದೆ. ಅರ್ಧಚಂದ್ರಾ ಕೃತಿಯ ಆಯುಧಗಳು ಉತ್ತಮ ತಯಾರಿಕಾ ನೈಪುಣ್ಯಕ್ಕೆ ಸಾಕ್ಷಿಗಳಾಗಿವೆ. ಈ ನೆಲೆಯ ಸೂಕ್ಷ್ಮಶಿಲಾಯುಗಗಳು ಕರ್ನಾಟಕದ ಇತರ ನೆಲೆಗಳ ಆಯುಧೋಪಕರಣಗಳಿಗಿಂತ ಕೆಲವು ವಿಷಯಗಳಲ್ಲಿ ಭಿನ್ನವಾಗಿದೆ. ಬಹುಶಃ ಇವು ಹೆಚ್ಚು ಪ್ರಾಚೀನವಾದವು.

	ಅನಂತರ ಕಬ್ಬಿಣಯುಗದ ಸಂಸ್ಕøತಿಯ ಹಂತದವರೆಗಿನ ಕಾಲಕ್ಕೆ ಸಂಬಂಧಿಸಿದಂತೆ ಈ ಪ್ರದೇಶದಲ್ಲಿ ಯಾವ ಅವಶೇಷಗಳೂ ಕಂಡುಬಂದಿಲ್ಲ. ದಕ್ಷಿಣ ಭಾರತದಲ್ಲಿ ಕ್ರಿ.ಪೂ. ಒಂದನೆಯ ಸಹಸ್ರಮಾನದಲ್ಲಿ ಪಬ್ರಲವಾಗಿದ್ದ ಬೃಹತ್ ಶಿಲಾಸಮಾಧಿ ಸಂಸ್ಕøತಿಯ ಕುರುಹುಗಳನ್ನು ಈ ಜಿಲ್ಲೆಯ ಕೇರಳ ಕಟ್ಟೆಯ ಬಳಿ 1906ರಲ್ಲಿ ಶೋಧಿಸಲಾಯಿತು. ಇಲ್ಲಿ ಕಲ್ಲು ಚಪ್ಪಡಿಗಳಿಂದ ನಿರ್ಮಿಸಲಾದ ಶಿಲಾ ತೊಟ್ಟಿಗಳಲ್ಲಿ ಇಂಥ ಸಮಾಧಿಗಳಿವೆ. ಆದರೆ ಇವು ಬಹುಮಟ್ಟಿಗೆ ನಾಶವಾಗಿರುವುದರಿಂದ ಸಂಶೋಧನೆಗೆ ಯೋಗ್ಯವಾಗಿಲ್ಲ. ಈ ಸಂಸ್ಕøತಿಗೆ ಸೇರಿದ ಕೆಲವು ಶಿಲಾ ವರ್ತುಲಗಳು ಸ್ವಲ್ಪ ದೂರದಲ್ಲಿ ಉತ್ತಮ ಸ್ಥಿತಿಯಲ್ಲಿ ಉಳಿದಿದೆ. ಈ ಪ್ರದೇಶದಲ್ಲಿ ಈ ಸಂಸ್ಕøತಿಯ ನೆಲೆಗಳು ಅಧಿಕ ಸಂಖ್ಯೆಯಲ್ಲಿದ್ದುದರಲ್ಲಿ ಸಂದೇಹವಿಲ್ಲವಾದರೂ ಹೆಚ್ಚಿನ ಸರ್ವೇಕ್ಷಣೆ ನಡೆಸಿ ಅವುಗಳ ಮಾಹಿತಿ ಪಡೆಯಬೇಕಾಗಿದೆ.

	ತುಮಕೂರು ಜಿಲ್ಲೆ ಕರ್ನಾಟಕದ ಇತರ ಪ್ರದೇಶಗಳಂತೆ ಇತಿಹಾಸ ಪೂರ್ವಕಾಲದುದ್ದಕ್ಕೂ ಆದಿಮಾನವನ ನಿವಾಸಸ್ಥಾನವಾಗಿತ್ತೆಂಬುದೂ ಮಾನವ ಸಂಸ್ಕøತಿಗಳ ಮುನ್ನಡೆಗೆ ಸಹಾಯಕವಾಗಿತ್ತೆಂಬದೂ ಇವುಗಳಿಂದ ಗೊತ್ತಾಗುತ್ತದೆ. ಪ್ರಾಗೈತಿಹಾಸಿಕ ಕಾಲಕ್ಕೆ ಸಂಬಂಧಿಸಿದ ಸಂಪೂರ್ಣ ಚಿತ್ರ ಪಡೆಯಲು ಇನ್ನೂ ಹೆಚ್ಚಿನ ಸಂಶೋಧನೆಗಳಾಗಬೇಕಾಗಿದೆ. 

	ಇತಿಹಾಸಯುಗದ ಆರಂಭಕಾಲದಲ್ಲಿ ಈ ಜಿಲ್ಲೆಯ ಕೆಲವು ಸ್ಥಳಗಳನ್ನು ನಿರ್ದೇಶಿಸುವ ಉಲ್ಲೇಖಗಳು ಸಾಹಿತ್ಯದಲ್ಲಿ ಕಂಡುಬರುತ್ತವೆ. ಗುಬ್ಬಿ ತಾಲ್ಲೂಕಿನ ಕಡಬದ ಬಳಿ ಕದಂಬ ಋಷಿಯ ಆಶ್ರಮವಿದ್ದುದಾಗಿಯೂ ಶ್ರೀರಾಮ ಲಂಕೆಯಿಂದ ಹಿಂದಿರುಗುವಾಗ ಅಲ್ಲಿ ತಂಗಿದ್ದು. ಅಲ್ಲಿ ಹರಿಯುವ ನದಿಗೆ ಅಡ್ಡಕಟ್ಟೆ ಕಟ್ಟಿದಿದುದಾಗಿಯೂ ಐತಿಹ್ಯವಿದೆ. ಅಂತೆಯೇ ತುರುವೇಕೆರೆ ತಾಲ್ಲೂಕಿನ ಸಂಪಿಗೆ, ಮಹಾಭಾರತದ ಕಾಲದ ದೊರೆ ಸುಧನ್ವನ ರಾಜಧಾನಿ ಚಂಪಕನಗರವೆಂದು ಹೇಳಲಾಗಿದೆ.     
                                    							(ಬಿ.ಕೆ.ಜಿ.)

	ಇತಿಹಾಸ : ಜಿಲ್ಲೆಗೆ ಸಂಬಂಧಿಸಿದಂತೆ ಅನೇಕ ಐತಿಹ್ಯಗಳು ಪ್ರಚಲಿತವಾಗಿದೆ. ತ್ರೇತಾಯುಗದಲ್ಲಿ ರಾಮ ಈಗಿನ ತುಮಕೂರು ಜಿಲ್ಲೆಯ ಭಾಗದಲ್ಲಿ ಹಾದು ಹೋಗುವಾಗ ಅವನ ಅನುಜ್ಞೆಯಂತೆ ಕಡಬದ ಕೆರೆಯನ್ನು ಕಟ್ಟಲಾಯಿತೆನ್ನಲಾಗಿದೆ. ನೃಗ ಚಕ್ರವರ್ತಿ ಜಿಲ್ಲೆಯ ನಾಗಿನಿ ಹೊಳೆಯಲ್ಲಿ ಸ್ನಾನ ಮಾಡಿ ತೊನ್ನುರೋಗವನ್ನು ಕಳೆದುಕೊಂಡನೆಂದೂ ಶಾಲಿವಾಹನ ತುರುವೇಕೆರೆ ತಾಲ್ಲೂಕಿನ ಹಳೆ ತಂಡುಗದಲ್ಲಿ ಜನಿಸಿದವನೆಂದೂ ದ್ವಾಪರಯುಗದಲ್ಲಿ ಪಾಂಡವರು ಮಧುಗಿರಿ ತಾಲ್ಲೂಕಿನ ಏಳುಸುತ್ತಿನ ಕೋಟೆ ಗ್ರಾಮವನ್ನು ಕಟ್ಟಿಸಿ ಅಲ್ಲಿ ವಾಸಿಸುತ್ತಿದ್ದರೆಂದೂ ಗುಬ್ಬಿ ತಾಲ್ಲೂಕಿನ ಸಂಪಿಗೆ ಗ್ರಾಮ ಪ್ರಾಚೀನ ಕಾಲದಲ್ಲಿ ಹಂಸಧ್ವಜನ ಮಗ ಸುಧನ್ವನ ರಾಜಧಾನಿ ಚಂಪಕನಗರವಾಗಿತ್ತೆಂದೂ ದೇವರಾಯದುರ್ಗವನ್ನು ಕಟ್ಟಿಸಿದ ಚೋರನಾಯಕ ಅಂಧಕ. ಕರ್ನಾಟಕದ ಭೂಪಾಲ ಹೇಮಚಂದ್ರನ ಮಗ ಸುಮತಿಯಿಂದ ಸೋತು ಹೋದನೆಂದೂ ಐತಿಹ್ಯಗಳುಂಟು.

	ಈಗಿನ ಜಿಲ್ಲೆಯ ಪ್ರದೇಶ ಸು. 7ನೆಯ ಶತಮಾನದಲ್ಲಿ ಗಂಗರಿಗೆ ಸೇರಿತ್ತು. ಶಿಷ್ಟಪ್ರಿಯನೆಂದು ಖ್ಯಾತನಾಗಿದ್ದ ನವಕಾಮನ (676-713) ಶಾಸನ ಹೆಬ್ಬೂರಿನಲ್ಲಿ. ಶ್ರೀಪುರುಷನ (726-771) ಶಾಸನ ಮಿಡಿಗೇಶಿಯಲ್ಲಿ, ಸತ್ಯವಾಕ್ಯ ನೊಳಂಬಕುಲಾಂತಕ (963-974) ಶಾಸನ ಕಿಬ್ಬನಹಳ್ಳಿಯಲ್ಲಿ ದೊರಕಿವೆ. ಸತ್ಯವಾಕ್ಯ ನೊಳಂಬಕುಲಾಂತಕ ಬಹುಶ 974ರಲ್ಲಿ ಮೃತನಾದ ಗಂಗ ಮಾರಸಿಂಹನಾಗಿರಬಹುದು. ನೊಳಂಬರೂ ಈ ಜಿಲ್ಲೆಯನ್ನಾಳಿದರು. ಇವರ ರಾಜಧಾನಿ ಶಿರಾ ತಾಲ್ಲೂಕಿನ ಉತ್ತರ ಅಂಚಿನಲ್ಲಿರುವ ಹೆಂಜೇರು, ನಿಡುಗಲ್ ಇವರಿಗೆ ಸೇರಿತ್ತು. 9ನೆಯ ಶತಮಾನದಲ್ಲಿ ಗಂಗ ನೀತಿಮಾರ್ಗನ ತಂಗಿ ಜಯಬ್ಬೆಯನ್ನು ಹೆಂಜೇರಿನ ನೊಳಂಬಾಧಿರಾಜ ವಿವಾಹವಾದ. ನೊಳಂಬಾಧಿರಾಜನ ಮಗ ಮಹೇಂದ್ರ; ಈತ ಚೋಳರನ್ನು ಸೋಲಿಸಿದ. ಮಹೇಂದ್ರನ ಮಗ ಅಯ್ಯಪ್ಪ ದೇವ (ನನ್ನಿಗ) ಗಂಗರೊಡನೆ ಯುದ್ಧಮಾಡಿದ. ನೊಳಂಬಾಡಿ 32.000 ಗ್ರಾಮಗಳ ರಾಜ್ಯ 10ನೆಯ ಶತಮಾನದಲ್ಲಿ ಈಗಿನ ತುಮಕೂರು ಹಾಗೂ ಚಿತ್ರದುರ್ಗ ಜಿಲ್ಲೆಗಳನ್ನು ಒಳಗೊಂಡಿತ್ತು. ಚಾಳುಕ್ಯರ ರಾಜ್ಯ ಈ ಜಿಲ್ಲೆಯ ಪ್ರದೇಶವನ್ನು ಒಳಗೊಂಡಿತ್ತೆಂಬುದನ್ನು ತೋರಿಸವ ಚೋಳರ ಮತ್ತು ಹೊಯ್ಸಳರ ಪ್ರಾರಂಭ ಕಾಲದ ಶಾಸನಗಳು ತಿಪಟೂರು ಮತ್ತು ಚಿಕ್ಕನಾಯಕನಹಳ್ಳಿ ತಾಲ್ಲೂಕುಗಳಲ್ಲಿ ದೊರಕಿವೆ. ಹೊಯ್ಸಳರು ತುಮಕೂರು ಜಿಲ್ಲೆಗೆ ಸೇರಿದ ಹೆಂಜೇರಿನ ಇರುಂಗೋಳನನ್ನು ಸೋಲಿಸಿದರು. ಇರುಂಗೋಳನ ಸಂತತಿಯವರು ಕರಿಕಾಲ ಚೋಳರ ಮನೆತನಕ್ಕೆ ಸೇರಿದವರೆಂದು ಹೇಳಿಕೊಂಡಿದ್ದಾರೆ. ಹೊಯ್ಸಳ 1ನೆಯ ನರಸಿಂಹನ ರಾಣಿ ಲೋಕಾಂಬಿಕೆ ತುರುವೇಕೆರೆಯವಳು. ಅವಳ ಹೆಸರಿನಲ್ಲಿ ಲೋಕಮ್ಮನ ಹಳ್ಳಿ ಇದೆ. ದಕ್ಷಿಣ ಭಾರತದಲ್ಲಿ ಅತ್ಯಂತ ಪ್ರಬಲವಾಗಿದ್ದ ವಿಜಯನಗರ ಸಾಮ್ರಾಜ್ಯದ ಪರಮಾಧಿಕಾರ ತುಮಕೂರು ಜಿಲ್ಲೆ ಇರುವ ಪ್ರದೇಶಕ್ಕೆ ವ್ಯಾಪಿಸಿತ್ತು. ಆಡಳಿತ ಉದ್ದೇಶಕ್ಕಾಗಿ ಅವರು ಜಿಲ್ಲೆಯಲ್ಲಿ ಪಾಳೆಯಗಾರನನ್ನು ನೇಮಿಸಿದ್ದರು. ವಿಜಯನಗರ ಪತನಗೊಂಡ ಮೇಲೆ (1565) ದಕ್ಷಿಣ ಭಾರತಕ್ಕೆ ಶತ್ರುಗಳು ನುಗ್ಗಲಾರಂಭಿಸಿದರು. ಬಿಜಾಪುರದ ದಂಡನಾಯಕ ರಣದುಲ್ಲಾಖಾನ 1638ರಲ್ಲಿ ತುಮಕೂರು ಜಿಲ್ಲೆಯ ಉತ್ತರ ಭಾಗಗಳನ್ನು ಸೂರೆಗೊಂಡ. ಶಿರಾ ಬಿಜಾಪುರದ ಸುಲ್ತಾನನಿಗೆ ಸೇರಿತ್ತು. ಮಾಲಕ್ ರೆಹಾನ್ ಎಂಬವನು ಶಿರಾದ ಸುಬೇದಾರನಾಗಿದ್ದ (1637-1650). ಔರಂಗ್‍ಜೇಬ್ 1687ರಲ್ಲಿ ಬಿಜಾಪುರ ಮತ್ತು ಗೋಲ್ಕೊಂಡ ರಾಜ್ಯಗಳನ್ನು ಗೆದ್ದುಕೊಂಡ ಮೇಲೆ ಶಿರಾ ಮೊಗಲ್ ಸಾಮ್ರಾಜ್ಯದ ದಖನ್ ಸುಬೆಯ ಕೇಂದ್ರವಾಗಿತ್ತು. ಸುಬೇದಾರ ಖಾಸಿಂಖಾನ್ 1698ರಲ್ಲಿ ಕಾಲವಾಗಲು ಜುಲ್‍ಫಿಕರ್ ಖಾನ್ ಸುಬೇದಾರನಾದ. ಷೇಕ್ ಫರೀದನ ಸುಬೇದಾರಿಕೆಯಲ್ಲಿ ಶಿರಾದ ಮಸೀದಿ ನಿರ್ಮಾಣವಾಯಿತು (1696). ರುಸ್ತುಂಜಂಗ್ ಶಿರಾದ ಪೇಟೆ ಮತ್ತು ಕೋಟೆಯನ್ನು ಕಟ್ಟಿಸಿ ಬಹುದ್ದೂರ್ ಎಂಬ ಬಿರುದನ್ನು ಪಡೆದ. ಅವನಿಗೆ ಖೈಫಿಯತ್ ಖಾನ್ ಎಂಬ ಹೆಸರೂ ಇತ್ತು. 1720ರಲ್ಲಿ ನವಾಬ್ ದುಸ ಕೂಲಿ ಖಾನ್, 1742ರಲ್ಲಿ ನವಾಬ್ ದಿಲಾವರ್ ಖಾನ್ ಸುಬೇದಾರರಾಗಿದ್ದರು. ಶ್ರೀರಂಗಪಟ್ಟಣದಲ್ಲಿ ಪ್ರಬಲರಾಗುತ್ತಿದ್ದ ಅರಸರು ಶಿರಾ ಸುಬೆಗೆ ಸೇರದಿದ್ದ ಕರ್ನಾಟಕ ಭಾಗಗಳನ್ನು ಆಕ್ರಮಿಸಿಕೊಳ್ಳುತ್ತಿದ್ದರು. 17ನೆಯ ಶತಮಾನದ ಕೊನೆಯಲ್ಲಿ ಚಿಕ್ಕದೇವರಾಯ ಗೆದ್ದುಕೊಂಡ ಸೀಮೆಗಳಲ್ಲಿ ತುಮಕೂರು ಜಿಲ್ಲೆಯ ತುಮಕೂರು, ದೇವರಾಯದುರ್ಗ, ಮಧುಗಿರಿ, ಮಿಡಿಗೇಶಿ, ಬಿಜ್ಜವಾರ ಮತ್ತು ಚೆನ್ನರಾಯದುರ್ಗ ಸೇರಿದ್ದುವು. 1757ರಲ್ಲಿ ಶಿರಾ ಮರಾಠರ ವಶವಾಯಿತು. ಹೈದರ್ ಅಲಿ 1761ರಲ್ಲಿ ಬಸಲತ್ ಜಂಗನೊಡನೆ ಸೇರಿ ಶಿರಾವನ್ನು ಗೆದ್ದುಕೊಂಡ. ಬಸಲತ್ ಜಂಗ್ ಅವನಿಗೆ ಶಿರಾದ ನವಾಬ ಎಂಬ ಬಿರುದನ್ನು ನೀಡಿದ. ಸೈನಿಕನಾಗಿ ಹೈದರ್ ನಾಯಕ್ ಎಂಬ ಹೆಸರು ಪಡೆದಿದ್ದ ಹೈದರ್ ಆಗ ನವಾಬ್ ಹೈದರ್ ಅಲಿ ಆದ. ಹೈದರನ ಸಹೋದರನ ಮೋಸದಿಂದ ಶಿರಾ ಪುನಃ ಮರಾಠರ ವಶವಾಯಿತು. ಟೀಪು ಅದನ್ನು 1774ರಲ್ಲಿ ಮತ್ತೆ ಪಡೆದುಕೊಂಡು, ತಾನು ಶ್ರೀರಂಗಪಟ್ಟಣ ದ್ವೀಪದಲ್ಲಿ ಸ್ಥಾಪಿಸಿದ ಷೈರ್‍ಗಂಜಾಂ ಪಟ್ಟಣಕ್ಕೆ ಅಲ್ಲಿಯ 12.000 ಕುಟುಂಬಗಳನ್ನು ಸಾಗಿಸಿದ. ಬೆಂಗಳೂರು ಕೋಟೆಯ ಮುತ್ತಿಗೆಯಲ್ಲಿ ಲಾರ್ಡ್ ಕಾರ್ನ್‍ವಾಲಿಸನಿಗೆ ನೆರವು ನೀಡಲು ಸಾಗುತ್ತಿದ್ದ ಮರಾಠರ ದಂಡು 1791ರಲ್ಲಿ ಮತ್ತೆ ಶಿರಾ ಪಟ್ಟಣವನ್ನು ಆಕ್ರಮಿಸಿತು. ಟೀಪುವಿನ ಪತನಾನಂತರ ಮೈಸೂರು ಅರಸರಿಗೆ ನೀಡಲಾದ ಪ್ರದೇಶದಲ್ಲಿ ತುಮಕೂರು ಜಿಲ್ಲೆಯ ಪ್ರದೇಶವೂ ಸೇರಿತ್ತು.

	ತುಮಕೂರು ಜಿಲ್ಲೆಯ ಹಲವು ಎಡೆಗಳಲ್ಲಿ ಅನೇಕ ಪಾಳೆಯಗಾರರು ಆಳ್ವಿಕೆ ನಡೆಸಿದರು; 1 ನಿಡುಗಲ್ ಪಾಳೆಯಗಾರರು; ನಿಡುಗಲ್ ದುರ್ಗ 9 ಮತ್ತು 10ನೆಯ ಶತಮಾನಗಳಲ್ಲಿ ಹೆಂಜೇರಿನ ನೊಳಂಬರಿಗೆ, ತರುವಾಯ ಚಾಳುಕ್ಯರ ಸಾಮಂತ ಇರುಂಗೋಳ ಚೋಳನ ವಂಶಜರಿಗೆ ಸೇರಿತ್ತು. ಹೊಯ್ಸಳ ಇಮ್ಮಡಿ ವೀರಬಲ್ಲಾಳ ಈ ದುರ್ಗವನ್ನು ವಶಪಡಿಸಿಕೊಂಡ. ವಿಜಯನಗರದ ವೆಂಕಟಪತಿರಾಯನ ಕಾಲದಲ್ಲಿ ಹರತಿಯ ತಿಪ್ಪರಾಜ (ತಿಪ್ಪನಾಯಕ) ಇದನ್ನು ಆಳುತ್ತಿದ್ದ (1640). ಅವನಿಗೆ ಕಠಾರಿ ರಾಜನೆಂಬ ಬಿರುದು ಇತ್ತು. ಈ ದುರ್ಗದಲ್ಲಿ 1761ರಲ್ಲಿ ಹೈದರನ ವಶವಾಯಿತು. ಟೀಪು ಈ ಪಾಳೆಯದ ಹೊಟ್ಟಣ್ಣನಾಯಕನನ್ನು ಸೆರೆಹಿಡಿದು ಶ್ರೀರಂಗಪಟ್ಟಣಕ್ಕೆ ತಂದು ಕೊಲ್ಲಿಸಿದ. 2 ಹೊಳವನ ಹಳ್ಳಿಯ ಪಾಳೆಯಗಾರರು; ಹೊವನಹಳ್ಳಿ ಕೋದಟೆಯನ್ನು ಕಟ್ಟಿದ ಬೈರೆಗೌಡ ವಿಜಯನಗರದ ಸಾಮಂತ ಪಾಳೆಯಗಾರ. ಮಾಗಡಿಯ ಪಾಳೇಯಗಾರ ಹೊಳವನ ಹಳ್ಳಿಯನ್ನು ಆಕ್ರಮಿಸಿ ಅದನ್ನು ತನ್ನ ತಮ್ಮ ಅಂಕನಗೌಡನಿಗೆ ಕೊಟ್ಟ. ಬೈರೆಗೌಡ ತನ್ನ ಮಗ ದೊಡ್ಡಬೈಚೇಗೌಡನೊಂದಿಗೆ ಶಿರಾದ ನವಾಬನ ಆಶ್ರಯ ಪಡೆದ. ಬೈರೇಗೌಡನ ಕಿರಿಯ ಮಗ ಸಣ್ಣಬೈಚೇಗೌಡ ದೊಡ್ಡಬಳ್ಳಾಪುರದ ಪಾಳೆಯಗಾರನ ನೆರವಿನಿಂದ ದುರ್ಗವನ್ನು ಗೆದ್ದುಕೊಂಡ. ಮುಂದಿನ ಎರಡು ವರ್ಷಗಳಲ್ಲಿ ಶಿರಾದ ಸೈನ್ಯ ದೊಡ್ಡಬಳ್ಳಾಪುರದ ಮೇಲೆ ಏರಿಬಂದು ಅದನ್ನು ಹಿಡಿದುಕೊಂಡಿತು. ಸಣ್ಣಬೈಚೇಗೌಡ ಪತನಹೊಂದಿದ. ದೊಡ್ಡ ಬೈಚೇಗೌಡ ಹೊಳವನಹಳ್ಳಿಯ ಪಾಳೆಯಗಾರನಾದ. ಅವನ ಆಡಳಿತಕ್ಕೆ ಒಳಪಟ್ಟ ಪ್ರದೇಶ ವಿಸ್ತøತವಾಯಿತು. ಕೊನೆಗೆ ಹೈದರ್ ಅಲಿ ಅದನ್ನು ಮೈಸೂರಿಗೆ ಸೇರಿಸಿಕೊಂಡ. 1792ರಲ್ಲಿ ಲಾರ್ಡ್ ಕಾರ್ನ್‍ವಾಲಿಸ್ ದೊಡ್ಡರಾಮೇಗೌಡನಿಗೆ ಹೊಳವನಹಳ್ಳಿಯ ಪಾಳೆಯಗಾರಿಕೆಯನ್ನು ವಹಿಸಿದ. ಆದರೆ ಕಾರ್ನ್‍ವಾಲಿಸ್ ಶ್ರೀರಂಗಪಟ್ಟಣದಿಂದ ಹಿಂದಿರುಗಿದಮೇಲೆ ಟೀಪು ಅದನ್ನು ಮತ್ತೆ ಆಕ್ರಮಿಸಿಕೊಂಡ. 3 ಮದ್ದಗಿರಿ ಪಾಳೆಯಗಾರರು; ಮಧುಗಿರಿ ಬೆಟ್ಟದ ಮೇಲಣ ಕೋಟೆ ಮತ್ತು ಬೆಟ್ಟದ ತಪ್ಪಲಿನ ಪಟ್ಟಣವನ್ನು ಕಟ್ಟಿಸಿದ ಹಿರೇಗೌಡನ ವಂಶಜರಾದ ರಾಮಗೌಡ ಮತ್ತು ತಿಮ್ಮಗೌಡರು ಆಳುತ್ತಿದ್ದಾಗ ಮೈಸೂರರಸರ ದಳವಾಯಿ ದೇವರಾಜ ಮಧುಗಿರಿಗೆ ಮುತ್ತಿಗೆಹಾಕಿ (1678) ಅವರಿಬ್ಬರನ್ನು ಕುಟುಂಬಸಮೇತ ಶ್ರೀರಂಗಪಟ್ಟಣಕ್ಕೆ ಸೆರೆ ಹಿಡಿದು ತಂದ. ಅನಂತರ ಅವರನ್ನು ವಿಮೋಚನೆಗೊಳಿಸಿ ಅವರಿಗೆ ಮಿಡಿಗೇಶಿಯನ್ನು ನೀಡಲಾಯಿತು. ಹೈದರ್ ಅಲಿ ಬಿದನೂರನ್ನು ವಶಪಡಿಸಿಕೊಂಡು ಅಲ್ಲಿಯ ರಾಣಿ ಮತ್ತು ಆಕೆಯ ಮಗ ಚೆನ್ನಬಸವನಾಯಕನನ್ನು ಮಧುಗಿರಿ ದುರ್ಗದಲ್ಲಿ ಸೆರೆ ದಿಟ್ಟ (1763). ಟೀಪು ಮಧುಗಿರಿಯನ್ನು 1791ರಲ್ಲಿ ಮರಾಠರಿಂದ ಬಿಡಿಸಿಕೊಂಡ. ಅವನ ಮರಣಾನಂತರ ಮಧುಗಿರಿಯನ್ನು ಬ್ರಿಟಿಷರು ಮೈಸೂರು ಸಂಸ್ಥಾನಕ್ಕೆ ಸೇರಿಸಿದರು (1799). ಹಾಗಲವಾಡಿ ಪಾಳೆಯವನ್ನು ಸ್ಥಾಪಿಸಿದ ಸಾಳನಾಯಕ. ಅವನ ತಮ್ಮ ಚಿಕ್ಕನಾಯಕನ ಹೆಸರಿನಲ್ಲಿ ಚಿಕ್ಕನಾಯಕನ ಹಳ್ಳಿ ಸ್ಥಾಪಿತವಾಯಿತು. ಇವರು ವಿಜಯನಗರದ ವೆಂಕಟಪತಿರಾಯನ ಸಾಮಂತ ಪಾಳೆಯಗಾರರು. ತುರುವೇಕೆರೆ ಇವರಿಗೆ ಸೇರಿತ್ತು. ಟೀಪು ಈ ಪಾಳೆಯಗಾರರ ಆಳ್ವಿಕೆಯನ್ನು ಕೊನೆಗೊಳಿಸಿದ. 5 ಹೆಬ್ಬೂರು ಪಾಳೆಯಪಟ್ಟಿನ ಸ್ಥಾಪಕರು ಹಳೆಗೌಡ ತಿಮ್ಮೆಗೌಡ. ವಿಜಯನಗರದ ಪತನದ ತರುವಾಯ ಹೆಬ್ಬೂರು ಮಾಗಡಿ ಕೆಂಪೇಗೌಡನ ವಶವಾಯಿತು; ಅವನಿಂದ ಅದನ್ನು ಚಿಕ್ಕದೇವರಾಯ ಗೆದ್ದುಕೊಂಡ. ತುರವಾಯ ಮರಾಠರ ದಾಳಿಗೆ ಒಳಗಾಗಿ ಕೊನೆಗೆ ಹೈದರನ ವಶವಾಯಿತು. 6 ಪಾವಗಡ ತುಮಕೂರು ಜಿಲ್ಲೆಯ ಪಾಳೆಯಗಾರರ ಬಲವಾದ ದುರ್ಗಗಳಲ್ಲಿ ಒಂದು. ತಿಮ್ಮಪ್ಪನಾಯಕ ಪಾಳೆಯಗಾರನಾಗಿದ್ದಾಗ ಹೈದರ್ ಪಾವಗಡಕ್ಕೆ ಮುತ್ತಿಗೆ ಹಾಕಿ ಪಾಳೆಯಗಾರರನ್ನೂ ಅವನ ಕುಟುಂಬವನ್ನೂ ಸೆರೆಹಿಡಿಸಿ ಶ್ರೀರಂಗಪಟ್ಟಣಕ್ಕೆ ಕಳುಹಿಸಿದ. 1777ರಲ್ಲಿ ಹೈದರ್ ಪಾವಗಡ ಕೋಟೆಯನ್ನು ಬಲಪಡಿಸಿದ. 7 ಗುಬ್ಬಿ ತಾಲ್ಲೂಕು ಮೂಗನಾಯಕನ ಕೋಟೆ ಸಹ ಒಂದು ಪಾಳೆಯಪಟ್ಟಾಗಿತ್ತು. ಪರಶುರಾಮ ಭಾವೆ ಶಿರಾ ಪಟ್ಟಣಕ್ಕೆ ಸಹ ಒಂದು ಪಾಳೆಯಪಟ್ಟಾಗಿತ್ತು. ಪರಶುರಾಮ ಭಾವೆ ಶಿರಾ ಪಟ್ಟಣಕ್ಕೆ ಮುತ್ತಿಗೆ ಹಾಕಿದಾಗ ಈ ಕೋಟೆಯನ್ನು ನಾಶಮಾಡಲು ಸೈನ್ಯವನ್ನು ಕಳುಹಿಸಿ ವಿಫಲನಾದ. 8 ಗುಬ್ಬಿ ತಾಲ್ಲೂಕು ಹೊಸಹಳ್ಳಿಯ ಪಾಳೆಯಗಾರರು ಶ್ರೀರಂಗಪಟ್ಟಣದ ಅರಸರ ಸಾಮಂತನಾಗಿದ್ದರು. ಅವರು ಕೊಡುತ್ತಿದ್ದ 500 ಪಗೋಡ ನಾಣ್ಯಗಳ ಕಪ್ಪವನ್ನು ಹೈದರ್ ಅಲಿ 2.500ಕ್ಕೆ ಹೆಚ್ಚಿಸಿದ. ಟೀಪು ಹೊಸಹಳ್ಳಿಯನ್ನು ವಶಪಡಿಸಿಕೊಂಡ. 9 ಮಧುಗಿರಿ ತಾಲ್ಲೂಕಿನ ಭಸ್ಮಂಗಿಬೆಟ್ಟದ ಕೋಟೆಯನ್ನು ಬೂದಿಬಸವ ಕಟ್ಟಿಸಿ ಪ್ರಬಲನಾಗಿದ್ದ. ಹೈದರ್ 1768ರಲ್ಲಿ ಕೋಟೆಯನ್ನು ಕೆಡವಿಸಿದ.

	ಕಮೀಷನರ ಆಡಳಿತದ ಅನಂತರ: ಮೈಸೂರು ಸಂಸ್ಥಾನ ಬ್ರಿಟಿಷ್ ಕಮಿಷನರ ಆಡಳಿತಕ್ಕೆ ಒಳಪಟ್ಟಿದ್ದಾಗ 1862ರಲ್ಲಿ ಈ ಸಂಸ್ಥಾನವನ್ನು ಎಂಟು ಜಿಲ್ಲೆಗಳಾಗಿ ವಿಂಗಡಿಸಲಾಯಿತು. ಅವುಗಳಲ್ಲಿ ತುಮಕೂರು ಒಂದು ಇದು ಚಿತ್ರದುರ್ಗ ವಿಭಾಗಕ್ಕೆ ಸೇರಿತ್ತು. 1863ರಲ್ಲಿ ಈ ವಿಭಾಗ ರದ್ದಾಗಿ ಹೊಸದಾಗಿ ಏರ್ಪಟ್ಟ ನಂದಿದುರ್ಗ ವಿಭಾಗಕ್ಕೆ ತುಮಕೂರು ಸೇರಿತು. 1866ರಲ್ಲಿ ಶಿರಾ ತಾಲ್ಲೂಕನ್ನು ಚಿತ್ರದುರ್ಗ ಜಿಲ್ಲೆಯಿಂದ ತುಮಕೂರು ಜಿಲ್ಲೆಗೆ ವರ್ಗ ಮಾಡಲಾಯಿತು. 1879ರಲ್ಲಿ ಸಂಸ್ಥಾನದ ವಿಭಾಗಗಳು ರದ್ದಾದುವು. 1882ರಲ್ಲಿ ಚಿತ್ರದುರ್ಗವನ್ನು ಒಂದು ಉಪವಿಭಾಗವಾಗಿ ಮಾಡಿ ತುಮಕೂರು ಜಿಲ್ಲೆಗೆ ಸೇರಿಸಲಾಯಿತು. 1886ರಲ್ಲಿ ಮತ್ತೆ ಚಿತ್ರದುರ್ಗ ಜಿಲ್ಲೆಯನ್ನು ರಚಿಸಲಾಯಿತಾದರೂ ಪಾವಗಡ ತಾಲ್ಲೂಕನ್ನು ತುಮಕೂರು ಜಿಲ್ಲೆಗೆ ಸೇರಿಸಲಾಯಿತು. 1956ರಲ್ಲಿ ವಿಶಾಲ ಮೈಸೂರು ರೂಪಿತವಾದಾಗ ಇದನ್ನು ಬೆಂಗಳೂರು ವಿಭಾಗಕ್ಕೆ ಸೇರಿಸಲಾಯಿತು. ಕರ್ನಾಟಕ ರಾಜ್ಯದಲ್ಲಿ ತುಮಕೂರು ಜಿಲ್ಲೆ ಬೆಂಗಳೂರು ವಿಭಾಗದ ಒಂದು ಜಿಲ್ಲೆ.      
                              (ವಿ.ಜಿ.ಕೆ.)

	ಶಾಸನಗಳು : ಈ ಜಿಲ್ಲೆಯಲ್ಲಿ 400ರಿಂದ 1903ರ ವರೆಗಿನ ಕಾಲಕ್ಕೆ ಸೇರಿದ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಶಾಸನಗಳು ಈ ವರೆಗೆ ದೊರಕಿವೆ. ಇವುಗಳಲ್ಲಿ ಹೆಚ್ಚಿನವು ದಾನಶಾಸನಗಳು. ವೀರಗಲ್ಲು-ಮಾಸ್ತಿಕಲ್ಲುಗಳೂ ಇವೆ. ಅವುಗಳಲ್ಲಿ ಕೆಲವು ಮುಖ್ಯ ಚಾರಿತ್ರಿಕ ಧಾರ್ಮಿಕ ಸಂಗತಿಗಳನ್ನು ತಿಳಿಸುವುದರಿಂದ ಇತಿಹಾಸದ ಪುನರ್ರಚನೆಗೆ ತುಂಬ ನೆರವಾಗುತ್ತದೆ. 400ರ ಗಂಗ ದೊರೆ ಮಾಧವನದೇ ಇಲ್ಲಿಯ ಶಾಸನಗಳ ಪೈಕಿ ಪ್ರಾಚೀನತಮವಾದ್ದು. ದಡಿಗನ ಮಗ ಇಮ್ಮಡಿ ಮಾಧವನದಿರಬಹುದಾದ ಈ ಶಾಸನದಲ್ಲಿ ಬೋಧಿಸತ್ತ್ವನೆಂಬ ಬೌದ್ಧನಿಗೆ ಕೊಟ್ಟ ದತ್ತಿಯ ವಿವರಗಳಿವೆ. ಗಂಗರ ಶಾಸನಗಳಲ್ಲಿ ನಮಕಾಮನ ಕಾಲದ ಹೆಬ್ಬೂರು ತಾಮ್ರಪಟಗಳು ಗಮನಾರ್ಹ. ಇತರ ಶಾಸನಗಳು ತಿಳಿಸುವ ಗಂಗ ವಂಶಾವಳಿಯ ವಿವರಗಳನ್ನೊದಗಿಸುವುದರೊಂದಿಗೆ ದುರ್ವಿನೀತನ ಗುರು ಪೂಜ್ಯಪಾದನ ಕೃತಿ ಶಬ್ದಾವತಾರದ ಪ್ರಸ್ತಾಪನ್ನೊಳಗೊಂಡಿದೆ. ಗಂಗ ಶ್ರೀಪುರುಷನ ಕಾಲದ ಅಧಿಕ ಸಂಖ್ಯೆಯ ಶಾಸನಗಳಲ್ಲಿ ಹೆಚ್ಚಿನವು ವೀರಗಲ್ಲುಗಳು. ಅವುಗಳಿಂದ ಗಂಗ-ರಾಷ್ಟ್ರಕೂಟರ ನಡುವಣ ಹೋರಾಟಗಳ ಬಗ್ಗೆ ವಿವರಗಳು ತಿಳಿದುಬರುತ್ತದೆ. ಮೂರನೆಯ ಮಾರಸಿಂಹ ಸತ್ಯವಾಕ್ಯನ 972ರ ಶಾಸನದಲ್ಲಿ ಅವನಿಗೆ ನೊಳಂಬಕುಲಾಂತಕನೆಂಬ ಬಿರುದು ಇರುವುದರಿಂದ ಗಂಗ-ನೊಳಂಬರ ಸಂಬಂಧಗಳನ್ನು ತಿಳಿಯಲು ಸಾಧ್ಯವಾಗುತ್ತದೆ. ಇದು ಈ ಜಿಲ್ಲೆಯಲ್ಲಿ ದೊರಕಿರುವ ಗಂಗರ ಕೊನೆಯ ಶಾಸನ.

	ಬಾದಾಮಿ ಚಾಳುಕ್ಯರ ಶಾಸನಗಳಾವುವೂ ಇಲ್ಲಿ ದೊರಕಿಲ್ಲ. ರಾಷ್ಟ್ರಕೂಟ ಕಾಲದ ಮೂರು ಶಾಸನಗಳಲ್ಲಿ ಮೊದಲನೆಯದು ಅಕಾಲವರ್ಷ ಮೊದಲನೆಯ ಕೃಷ್ಣ ಎಲ್ಲೋರದಲ್ಲಿ ಕೃಷ್ಣೇಶ್ವರ ಅಥವಾ ಕೈಲಾಸನಾಥ ಮಂದಿರವನ್ನು ಕಟ್ಟಿಸಿದ ಮತ್ತು ಗಂಗದೊರೆ ಶಿವಮಾರನನ್ನು ಸೆರೆಹಿಡಿದ ಅನಂತರ ವಿಮಲಾದಿತ್ಯನನ್ನು ಪ್ರಾಂತಾಧಿಕಾರಿಯಾಗಿ ನೇಮಿಸಿದ ಸಂಗತಿಗಳನ್ನು ತಿಳಿಸುತ್ತದೆ. ಹೇಮಾವತಿಯಲ್ಲಿ ಸಿಕ್ಕಿರುವ 982ರ ಶಾಸನ ರಾಷ್ಟ್ರಕೂಟರ ಕೊನೆಯ ದೊರೆ 4ನೆಯ ಇಂದ್ರ ಶ್ರವಣಬೆಳಗೊಳದಲ್ಲಿ 982ರ ಶಾಸನ ಮಾರ್ಚ್ 20 ಸೋಮವಾರದಂದು ಜೈನಧಾರ್ಮಿಕ ನಿಧಿಗಳಿಗೆ ಅನುಸಾರವಾಗಿ ಸತ್ತ ಸಂಗತಿಯನ್ನು ತಿಳಿಸುತ್ತದೆ.

	ನೊಳಂಬ ಪಲ್ಲವರ 20ಕ್ಕೂ ಮಿಕ್ಕ ಶಾಸನಗಳಿಂದ ಅವರ ವಂಶಾವಳಿ ಮತ್ತು ರಾಜಕೀಯ ಚಟುವಟಿಕೆಗಳ ಬಗ್ಗೆ ವಿವರಗಳು ಸಿಕ್ಕುತ್ತವೆ. ಮಹೇಂದ್ರ ನೊಳಂಬನ ಶಾಸನಗಳಿಂದ ಚೋಳರ ಮೇಲಿನ ಅವನ ವಿಜಯಗಳು ತಿಳಿದು ಬಂದರೆ, ಅವನ ಮಗ ನನ್ನಿಗನ ಶಾಸನಗಳು ಅವನ ಬಗ್ಗೆ ವಿವರಗಳನ್ನು ತಿಳಿಸುತ್ತದೆ. ಅವನ ರಾಣಿಯರು ನಾಗಿಯಬ್ಬೆ ಮತ್ತು ಹೆಲೆಯಬ್ಬೆ ಎಂಬ ಸಂಗತಿ ತಿಳಿದುಬರುತ್ತದೆ. ನನ್ನಿಗ ಮತ್ತು ಅವನ ಮಗ ಬೀರನೊಳಂಬ ಗಂಗಬೂತುಗನೊಡನೆ ನಡೆಸಿದ ಕದನಗಳನ್ನು ಕುರಿತ ಮಾಹಿತಿಗಳನ್ನು ಈ ಶಾಸನಗಳು ನೀಡುತ್ತವೆ. ಅನಂತರದ ಶಾಸನಗಳಲ್ಲಿ ನೊಳಂಬ ರಾಜರಿಗೆ ಅಹವಮಲ್ಲ ಎಂಬ ಬಿರುದಿರುವುದರಿಂದ ಅವರು ಚಾಳುಕ್ಯರ ಸಾಮಂತರಾದ ಸಂಗತಿ ವಿಶದವಾಗುತ್ತದೆ.

	ಕಲ್ಯಾಣ ಚಾಳುಕ್ಯ ಶಾಸನಗಳೂ ಸಿಕ್ಕಿದ್ದರೂ ಅವುಗಳ ಬಗ್ಗೆ ಹೆಚ್ಚಿನ ಮಾಹಿತಿಗಳೇನೂ ತಿಳಿದುಬರುವುದಿಲ್ಲ. ಅವರ ಅಧೀನರಾದ ಚೋಳ ಮತ್ತು ಹೊಯ್ಸಳರು ಈ ಶಾಸನಗಳಿಗೆ ಕಾರಣರು. ಚೋಳರ 32 ಶಾಸನಗಳಲ್ಲಿ ಎರಡು ಮಾತ್ರ ಮೂಲ ಚೋಳ ದೊರೆಗಳವು; ಉಳಿದವು ಅವರ ಸಾಮಂತರು ಮತ್ತು ಅಧಿಕಾರಿಗಳು ಕೆತ್ತಿಸಿದವು. ಅವುಗಳಿಂದ ಹೆಚ್ಚಿನ ವಿಷಯಗಳು ದೊರಕುವುದಿಲ್ಲ.

	ಈ ಜಿಲ್ಲೆಯಲ್ಲಿ ದೊರಕಿರುವ ಅತ್ಯಧಿಕ ಸಂಖ್ಯೆಯ ಶಾಸನಗಳು ಹೊಯ್ಸಳ ವಂಶದ ಅರಸರಿಗೆ ಸೇರಿದವು. 1078-1342 ಅವಧಿಗೆ ಸೇರಿದ ಒಟ್ಟು 157 ಶಾಸನಗಳಲ್ಲಿ ಕೆಲವು ಐತಿಹಾಸಿಕ ಮಹತ್ತ್ವವುಳ್ಳವಾಗಿವೆ. ವಿಷ್ಣುವರ್ಧನನ 1130ರ ಶಾಸನದಿಂದ ಗಂಗವಾಡಿ-9600 ಮತ್ತು ನೊಳಂಬವಾಡಿ-32000 ಪ್ರಾಂತ್ಯಗಳು ಅವನ ಆಳ್ವಿಕೆಗೆ ಸೇರಿದ್ದ ಸಂಗತಿ ದೃಢಪಡುತ್ತದೆ. ಮರುಗೆರೆ ನಾಡನ್ನು ಕೈರಾಳದಿಂದ ಆಳುತ್ತಿದ್ದ ಸಾಮಂತ ಗುಲಿಬಾಚಿ ಪ್ರಾಚೀನ ರಾಷ್ಟ್ರಕೂಟ ವಂಶದವನೆಂದೂ ಕೈರಾಶದಲ್ಲಿ ಬೌದ್ಧ, ಜೈನ, ಶೈವ ಮತ್ತು ವೈಷ್ಣವ ದೇವಾಲಯಗಳನ್ನು ಕಟ್ಟಿಸಿದನೆಂದೂ 1151ರ ಒಂದು ಶಾಸನದಿಂದ ತಿಳಿದುಬರುತ್ತದೆ. ಇಮ್ಮಡಿ ಬಲ್ಲಾಳನ ಅನೇಕ ದಿಗ್ವಿಜಯಗಳು, ಅವನು ಪಾಂಡ್ಯರನ್ನು ಸೋಲಿಸಿ ಅವರ ರಾಜಧಾನಿ ಉಚ್ಚಂಗಿದುರ್ಗವನ್ನು ವಶಪಡಿಸಿಕೊಂಡದ್ದು, ಅವನ ದಂಡನಾಯಕ ಮಾಧವನ ಶೌರ್ಯ ಸಾಹಸಗಳು. ಹೊಯ್ಸಳ ರಾಜ್ಯದ ಉತ್ತರ ಗಡಿ ಭೀಮಾ ನದಿಯ ವರೆಗೆ ಹಬ್ಬಿದ್ದುದು ಮುಂತಾದ ಸಂಗತಿಗಳು ಅವನ ಶಾಸನಗಳಿಂದ ತಿಳಿದುಬರುತ್ತವೆ. 1229ರ ಇಮ್ಮಡಿ ನರಸಿಂಹನ ಅಧಿಕಾರ ಕಂಚಿಯ ವರೆಗೆ ವಿಸ್ತರಿಸಿದ್ದ ಸಂಗತಿಯನ್ನು ಅವನ 1229ರ ಶಾಸನ ತಿಳಿಸುತ್ತದೆ. ಅವನ ದಂಡನಾಯಕರಾದ ಅಪ್ಪಯ ಮತ್ತು ಗೋಪಯ್ಯ (ಪಲ್ಲವ) ಕಾಡವರಾಯನನ್ನು ಸೋಲಿಸಿ ಚೋಳ ಮುಮ್ಮಡಿ ರಾಜರಾಜನನ್ನು ಸೆರೆಯಿಂದ ಬಿಡಿಸಿ ಅವನನ್ನು ಚೋಳಸಿಂಹಾಸನದ ಮೇಲೆ ಪ್ರತಿಷ್ಠಾಪಿಸಿದ್ದು ಅವನ 1233ರ ಶಾಸನದಿಂದ ಗೊತ್ತಾಗುತ್ತದೆ. ಮುಮ್ಮಡಿ ನರಸಿಂಹನಶಾಸನಗಳು ಅವನು ಪಲ್ಲವರನ್ನು ಸೋಲಿಸಿ ಪಾಂಡ್ಯ ಮತ್ತು ಚೋಳ ದೊರೆಗಳಿಗೆ ನೆರವು ನೀಡಿದನೆಂಬುದನ್ನು ತಿಳಿಸುತ್ತದೆ. ಮುಮ್ಮಡಿ ಬಲ್ಲಾಳನ ಅನೇಕ ಶಾಸನಗಳಲ್ಲಿ ಆ ಕಾಲದ ಹೊಯ್ಸಳ ಸಾಮ್ರಾಜ್ಯ ಎದುರಿಸಬೇಕಾಗಿ ಬಂದ ಮಹಮ್ಮದಿಯರ ದಾಳಿಗಳ ವಿಚಾರವಿದೆ.

	ಅನಂತರಕಾಲದ ಕಾಕತೀಯರ ಒಂದು ಶಾಸನವನ್ನು ಬಿಟ್ಟರೆ ಈ ಜಿಲ್ಲೆಯಲ್ಲಿ ಸಿಕ್ಕಿದ, 1354-1681ರ ಕಾಲಮಿತಿಗೆ ಸೇರಿದ, ವಿಜಯನಗರ ದೊರೆಗಳ 136 ಶಾಸನಗಳು ಕೆಲವು ಮುಖ್ಯ ಚಾರಿತ್ರಿಕ ಸಂಗತಿಗಳನ್ನು ತಿಳಿಸುತ್ತದೆ. 1380ರ ಇಮ್ಮಡಿ ಹರಿಹರನ ಶಾಸನದಲ್ಲಿ ಅದವಾನಿ ಕೋಟೆಗೆ ಮುತ್ತಿಗೆ ಹಾಕಿದ್ದ ಮುಸ್ಲಿಮರವನ್ನು ಹೊಡೆದಟ್ಟಿದ ವಿಷಯವೂ ಇಮ್ಮಡಿ ದೇವರಾಯನ 1426ರ ತಾಮ್ರ ಶಾಸನದಲ್ಲಿ ಅವನ ಅಜ್ಜ ಮೊದಲನೆಯ ದೇವರಾಯ ಮತ್ತು ತಂದೆ-ತಾಯಿ ವಿಜಯರಾಜ ಮತ್ತು ನಾರಾಯಣಾಂಬಿಕೆಯರ ಬಗ್ಗೆ ವಿವರಗಳೂ ಇರುವುದರಿಂದ ವಂಶಾವಳಿಯನ್ನು ಮತ್ತೆ ನಿರ್ಮಿಸಲು ಇವು ಸಹಾಯಕವಾಗಿದೆ. ರಾಜ್ಯದಲ್ಲಿದ್ದ ಅನಾಯಕ ಪರಿಸ್ಥಿತಿ ಮತ್ತು ಅಧಿಕಾರಕ್ಕಾಗಿ ನಡೆದ ಪಿತೂರಿ-ಕಚ್ಚಾಟಗಳ ಬಗ್ಗೆ ಮಾಹಿತಿಗಳು ಸಾಳುವ ಮತ್ತು ತುಳುವ ವಂಶದ ರಾಜರುಗಳ ಶಾಸನಗಳಿಂದ ದೊರಕುತ್ತವೆ. ಅನಂತರದ ಕೃಷ್ಣದೇವರಾಯನ ಅನೇಕ ಶಾಸನಗಳು ಬಹುವಾಗಿ ದಾನಶಾಸನಗಳು. 15-16ನೆಯ ಶತಮಾನಗಳ ಶಾಸನಗಳಿಂದ ವಿಜಯನಗರ ಸಾಮ್ರಾಟರ ಮತ್ತು ಈ ಭಾಗದಲ್ಲಿದ್ದ ಅವರ ಸಾಮಂತರ ವಿಷಯಗಳು ತಿಳಿದು ಬರುತ್ತವೆ. ನಿಡುಗಲ್, ಹೊಳವನಹಳ್ಳಿ, ಮಧುಗಿರಿ, ಹಾಗಲವಾಡಿ ಮತ್ತು ಹೆಬ್ಬೂರು ಪ್ರಾಂತ್ಯಗಳ ಸಾಮಂತರ ಇತಿಹಾಸವನ್ನು ತಿಳಿಯಲು ಈ ಶಾಸನಗಳು ಉಪಯುಕ್ತವಾಗಿವೆ.

	ಮೈಸೂರು ಒಡೆಯರ ಕಾಲದ, 1662-1858ರ 36 ಶಾಸನಗಳು ರಾಜವಂಶದ ವಂಶಾವಳಿಯ ವಿವರಗಳನ್ನೂ ವಿವಧ ರಾಜರ ದಾನದತ್ತಿಗಳನ್ನೂ ಅವರ ರಾಜ್ಯ ವಿಸ್ತರಣೆ ಮತ್ತು ಶತ್ರುನಿರ್ಮೂಲನ ಕಾರ್ಯವನ್ನೂ ತಿಳಿಸುತ್ತದೆ. 1662ರ ಹಲಗೆರೆಯ ದೊಡ್ಡದೇವರಾಜನ ಶಾಸನದಲ್ಲಿ ಯದುವಂಶ ಸ್ಥಾಪನೆ, ಆವರೆಗಿನ ವಂಶಾವಳಿ. ಅವರ ದಾನಧರ್ಮಗಳು, ಅಗ್ರಹಾರ ಸ್ಥಾಪನೆ-ಇವುಗಳ ಬಗ್ಗೆ ವಿವರಗಳಿವೆ. ಹೈದರ್ ಅಲಿಯ ಕೆಲವು ಶಾಸನಗಳಿಂದ ಆಗಿನ ರಾಜಕೀಯ ವಿದ್ಯಮಾನಗಳು ತಿಳಿದುಬರುತ್ತದೆ.

	ವಾಸ್ತುಶಿಲ್ಪ: ಈ ಜಿಲ್ಲೆಯಲ್ಲಿ ಅನೇಕ ದೇವಾಲಯಗಳೂ ಇತರ ವಾಸ್ತು ನಿರ್ಮಾಣಗಳೂ ಉಳಿದುಬಂದಿವೆ. ಅವುಗಳಲ್ಲಿ ಪಲ್ಲವ-ನೊಳಂಬ ಕಾಲದ ಕೆಲವನ್ನು ಬಿಟ್ಟರೆ ಹೆಚ್ಚಿನವು ಹೊಯ್ಸಳ ಯುಗಕ್ಕೆ ಅನಂತರದ ಕಾಲದವು. ಹೊಯ್ಸಳ ಕಟ್ಟಡಗಳನ್ನು ಜೀರ್ಣೋದ್ಧಾರ ಮಾಡುವುದರೊಂದಿಗೆ ವಿಜಯನಗರದ ಮತ್ತು ಅನಂಗರದ ಕಾಲದಲ್ಲೂ ಕೆಲವು ಕಟ್ಟಡಗಳ ನಿರ್ಮಾಣಕಾರ್ಯ ನಡೆದು ಬಂದಿದೆ. ವಿಜಯನಗರದ ಕಾಲದ ತರುವಾಯ ಈ ಪ್ರದೇಶದಲ್ಲಿ ಪಾಳೆಯಗಾರರ ಮತ್ತು ಮೈಸೂರರಸರ ಆಶ್ರಯದಲ್ಲಿ ನಿರ್ಮಿಸಲಾದ ಕೋಟೆಕೊತ್ತಲ ಮತ್ತು ಸರೋವರಗಳು ಉಳಿದುಬಂದಿದೆ.

	ಈ ಜಿಲ್ಲೆಯಲ್ಲಿ ಉಳಿದುಬಂದಿರುವ ಪ್ರಾಚೀನತಮ ದೇವಾಲಯಗಳು ನೊಣವಿನಕೆರೆಯಲ್ಲಿವೆ. ನೊಣವಿನಕೆರೆ ಅಥವಾ ನೊಣಬನಕೆರೆ ನೊಳಂಬ-ಪಲ್ಲವರ ಆಳ್ವಿಕೆಯ ಸ್ಮಾರಕ. ಅವರ ಕಾಲದ್ದೆಂದು ಹೇಳಲಾದ, ಈ ಊರಿನ ಹೆಸರಿಗೆ ಕಾರಣವಾದ ವಿಶಾಲವಾದ ಕೆರೆಯ ಉಲ್ಲೇಖ 1162ರ ಒಂದು ಶಾಸನದಲ್ಲಿದೆ. ಇಲ್ಲಿರುವ ನೊಣಬೇಶ್ವರ, ಶಾಂತೇಶ್ವರ, ಗರಿಗೇಶ್ವರ, ಚೋಳೇಶ್ವರ ಮತ್ತು ಕಲ್ಲೇಶ್ವರ ಎಂಬ ಐದು ಶಿವಾಲಯಗಳು ಬಹುಶಃ 10-11ನೆಯ ಶತಮಾನಕ್ಕೆ ಸೇರಿದವು. ಗರ್ಭಗೃಹ ಮತ್ತು ನವರಂಗಗಳುಳ್ಳ ನೊಣಬೇಶ್ವರ ಗುಡಿಯ ಚಾವಣಿ ಚಪ್ಪಟೆಯಾಗಿದೆ. ಕಣಶಿಲೆಯಲ್ಲಿ ಕಟ್ಟಲಾದ ದ್ರಾವಿಡ ಶೈಲಿಯ ಈ ಮಂದಿರದಲ್ಲಿ ಹೆಚ್ಚಿನ ಅಲಂಕರಣವಿಲ್ಲ. ಗರೀಗೇಶ್ವರ ಮತ್ತು ಶಾಂತೇಶ್ವರ ಗುಡಿಗಳು ನೊಣಬೇಶ್ವರ ಮಂದಿರವನ್ನೇ ಹೋಲುತ್ತವೆ. ನೊಣಬೇಶ್ವರ ತಲೆಯುಳ್ಳ ಲಿಂಗ, ಗರಿಗೇಶ್ವರದ, ಸಪ್ತಮಾತೃಕೆಯರ ಶಿಲ್ಪಗಳು, ನವರಂಗಗಳ ಚಾವಣಿಯ ಗೋಪಾಲಸ್ವಾಮಿ ದೇವಾಲಯ ತ್ರಿಕೂಟಾಚಲ, ಎತ್ತರವಾದ ಜಗತಿಯ ಮೇಲೆ ಬಳಪದ ಕಲ್ಲಿನಲ್ಲಿ ಕಟ್ಟಿದ ಮೂರು ಗರ್ಭಗುಡಿಗಳು. ಒಳಗಿನ ನವರಂಗ, ಪಶ್ಚಿಮದ ಸುಕನಾಸಿ ಮತ್ತು ಗೋಪುರವಿಲ್ಲದ ಮಹಾದ್ವಾರ-ಇವುಗಳಿಗೆ ವಿಜಯನಗರ ಕಾಲದಲ್ಲಿ ಕಣಶಿಲೆಯಲ್ಲಿ ಹೊರಗಿನ ನವರಂಗ ಮತ್ತು ಮುಖಮಂಟಪಗಳನ್ನು ಜೋಡಿಸಲಾಗಿದೆ. ದಕ್ಷಿಣದಲ್ಲಿ ಗರ್ಭಗುಡಿಯಲ್ಲಿ ವೇಣುಗೋಪಾಲ, ಉತ್ತರದಲ್ಲಿ ಯೋಗಾನರಸಿಂಹ ಮತ್ತು ಪಶ್ಚಿಮ ಗರ್ಭಗುಡಿಯಲ್ಲಿ ಜನಾರ್ಧನ ಪ್ರತಿಮೆಗಳು ಹೊಯ್ಸಳ ಶೈಲಿಯಲ್ಲಿವೆ. ವಿಜಯಗನರದ ಕಾಲದ ಜನಾರ್ಧನ ಮತ್ತು ಲಕ್ಷ್ಮೀದೇವಿಯರ ಉತ್ಸವಮೂರ್ತಿಗಳು ಸುಂದರವಾಗಿವೆ. ಬೇಟೆರಾಯಮಂದಿರ ವಿಜಯನಗರ ಶೈಲಿಯಲ್ಲಿ 16ನೆಯ ಶತಮಾನದಲ್ಲಿ ಕೋನೇರಿ ಅಯ್ಯಂಗಾರ್ ಎಂಬಾತ ಕಟ್ಟಿಸಿದ್ದು. ಕುಲಾವಿ ನಿಲುವಂಗಿಗಳನ್ನು ತೊಟ್ಟ ಅವನ ಶಿಲ್ಪ ನವರಂಗದ ಕಂಬದ ಮೇಲಿದೆ. ಗರ್ಭಗೃಹದಲ್ಲಿ ಹೊಯ್ಸಳ ಶೈಲಿ ಪ್ರಭಾವವನ್ನು ಬೀರುವ ವಿಜಯನಗರದ ಕಾಲದ ಕರಿಕಲ್ಲಿನ ಪ್ರಭಾವಳಿಯುತವಾದ ಸುಂದರ ವೆಂಕಟೇಶ ವಿಗ್ರಹವಿದೆ. ಗರ್ಭಗೃಹ, ಅಂತರಾಳ, ನವರಂಗ ಮತ್ತು ಮಂಟಪಗಳಿರುವ ಈ ದೇವಾಲಯ ಉತ್ತಮ ವಾಸ್ತು ನಿರ್ಮಾಣ. 

ವಿಘ್ನಸಂತೆಯಲ್ಲಿ ಹೊಯ್ಸಳ ಮುಮ್ಮಡಿ ನರಸಿಂಹನ ಆಳ್ವಿಕೆಯಲ್ಲಿ 1286ರಲ್ಲಿ ನಿರ್ಮಿಸಲಾದ ಲಕ್ಷ್ಮೀನರಸಿಂಹ ಮಂದಿರ ಉತ್ತಮ ಕಲಾಕೃತಿ. ಹೊಯ್ಸಳ ಶೈಲಿಯಲ್ಲಿ ಜಗತಿಯ ಮೇಲೆ ನಿಂತ ತ್ರಿಕೂಟಾಚಲವಾದ ಈ ಮಂದಿರದಲ್ಲಿ ಪಶ್ಚಿಮದ ಗರ್ಭಗುಡಿಗೆ ಅಂತರಾಳ ಮತ್ತು ಶಿಖರಗಳಿವೆ. ಶಿಖರದಲ್ಲಿ ಸುಂದರ ಕೆತ್ತನೆಗಳಿಂದ ಕೂಡಿದ, ಪಿರಮಿಡ್ಡಿನಾಕಾರದ, ಅಂತಸ್ತುಗಳೂ ಲತಾಪಟ್ಟಿಕೆಗಳೂ ಅವುಗಳಲ್ಲಿ ದೇವತಾವಿಗ್ರಹಗಳೂ ಇವೆ. ಮುಖ್ಯ ಗರ್ಭಗುಡಿಯಲ್ಲಿ ಇಬ್ಬರು ದೇವಿಯರೊಡಗೂಡಿದ, 5 ಅಡಿ ಎತ್ತರದ ಅಂದವಾದ ಕೇಶವ ವಿಗ್ರಹವಿದೆ. ಅದರ ಪ್ರಭಾವಳಿಯಲ್ಲಿ ದಶಾವತಾರಗಳನ್ನು ಕೆತ್ತಲಾಗಿದೆ. ದಕ್ಷಿಣದ ಗರ್ಭಗುಡಿಯಲ್ಲಿ ವೇಣುಗೋಪಾಲ ಮತ್ತು ಉತ್ತರದ ಗರ್ಭಗುಡಿಯಲ್ಲಿ ಲಕ್ಷ್ಮೀನರಸಿಂಹ ಮೂರ್ತಿಗಳಿವೆ. ಹೊರಗೋಡೆಗಳ ತಳಭಾಗದಲ್ಲಿ ಚಿತ್ರಪಟ್ಟಿಕೆಗಳು. ಮೇಲ್ಭಾಗದಲ್ಲಿ ಸ್ತಂಭಿಕೆಗಳಿಂದ ವಿಭಾಗಿಸಿದ ಫಲಕಗಳಲ್ಲಿ ಯಕ್ಷರ ಮತ್ತು ದೇವತೆಗಳ ಶಿಲ್ಪಗಳು ಇವೆ. ಮುಖಮಂಟಪದ ಚಾವಣಿಯಲ್ಲಿರುವ ಅಷ್ಟದಿಕ್ಪಾಲಕರ ಶಿಲ್ಪಗಳೂ ಮಧ್ಯದ ಕಮಲವೂ ಅಂದವಾಗಿದೆ. ಇತರ ಕೆತ್ತನೆಗಳಲ್ಲಿ ನೃತ್ಯಗಣಪತಿ, ಮಹಿಷಮರ್ದಿನಿ ಮತ್ತು ವೇಣುಗೋಪಾಲ ಗಮನಾರ್ಹವಾದವು. ಇಲ್ಲಿಯ ಮತ್ತೊಂದು ದೇವಾಲಯ ಬಾಲಲಿಂಗೇಶ್ವರನದು. ತ್ರಿಕೂಟಾಚಲವಾದರೂ ಇದರಲ್ಲಿ ಹೆಚ್ಚು ಅಲಂಕಾರ ಕೆತ್ತನೆಗಳಿಲ್ಲ. ಇದರ ಶಿಖರದ ಸುಕನಾಸಿಯ ಮೇಲೆ ಹೊಯ್ಸಳ ಲಾಂಛನದ-ಸಳ-ಹುಲಿಯ-ಶಿಲ್ಪ ಇದೆ. ಇಲ್ಲಿ ಮೂರನೆಯ ಮಂದಿರವಾದ ಭೈರವ ದೇವಾಲಯದಲ್ಲಿ ಶವಾಸನದಲ್ಲಿ ಕುಳಿತ ಉಮಾಮಹೇಶ್ವರ, ಭೈರವಮೂರ್ತಿಗಳು ಸುಂದರವಾಗಿವೆ. ಗುಡಿಯ ಮುಂದೆ ಆತ್ಮಬಲಿಯಲ್ಲಿ ನಿರತರಾದ ವೀರರ ಸ್ಮಾರಕಗಳಿವೆ. ನಾಲ್ಕನೆಯದಾದ ಬನಶಂಕರಿ ಗುಡಿಯಲ್ಲಿ ಶವಾಸನದಲ್ಲಿ ಕುಳಿತ ದೇವಿಯ ಸುಂದರ ಪ್ರತಿಮೆ ಭಗ್ನವಾಗಿದೆ. ನಾಗಲಾಪುರದಲ್ಲಿ ಹೊಯ್ಸಳ ಶೈಲಿಯ ಚೆನ್ನಕೇಶವ ಮತ್ತು ಕೇದಾರೇಶ್ವರ ಮಂದಿರಗಳಿವೆ. ನಕ್ಷತ್ರಾಕಾರದ ಜಗತಿಯ ಮೇಲಿರುವ ಚೆನ್ನಕೇಶವ ಗುಡಿಯ ಹೊರಗೋಡೆಗಳ ಕೆಳಭಾಗದಲ್ಲಿ ಆರು ಚಿತ್ರ ಪಟ್ಟಿಕೆಗಳೂ ಶಿಖರಗಳಿರುವ ಗೂಡುಗಳಲ್ಲಿ ನೃತ್ಯಗಣೇಶ, ಅಮರನಾರಾಯಣ, ವಿಷ್ಣು, ಗೋವರ್ಧನಧಾರಿ, ಯೋಗ ನಾರಾಯಣ, ಇಂದ್ರ, ಕೃಷ್ಣ, ಸತ್ಯಭಾಮಾ, ಅಷ್ಟಭುಜದೇವಿ, ಸರಸ್ವತಿ, ಬ್ರಹ್ಮ, ಹಯ ಗ್ರೀವ್, ವಿಠ್ಠಲ, ದಕ್ಷಿಣಾಮೂರ್ತಿ, ದುರ್ಗಾ, ಭೂವರಾಹ ಮುಂತಾದ ಸುಂದರ ಶಿಲ್ಪಗಳೂ ಇವೆ. ನವರಂಗದ ಭುವನೇಶ್ವರಿಯಲ್ಲಿ ಅಂದವಾದ ಅಷ್ಟದಿಕ್ಪಾಲಕರ, ಮಧ್ಯದಲ್ಲಿ ನೇತಾಡುತ್ತಿರುವ ಕಮಲದ ಕೆತ್ತನೆಗಳಿವೆ. ಸುಕನಾಸಿಯ ಭವ್ಯ ಕೆತ್ತನೆಗಳನ್ನೂ ದ್ವಾರಪಾಲಕರನ್ನೂ ದಾಟಿ ಗರ್ಭ ಗುಡಿಯನ್ನು ಹೊಕ್ಕರೆ ವಿಜಯನಗರದ ಕಾಲದಲ್ಲಿ ಪ್ರತಿಷ್ಠಾಪಿಸಿದ, 5 ಅಡಿ ಎತ್ತರದ, ವೆಂಕಟೇಶ ವಿಗ್ರಹ ಕಂಡುಬರುತ್ತದೆ. ಮೊದಲು ಅಲ್ಲಿದ್ದ ಕೇಶವ ಪ್ರತಿಮೆ ಕಳೆದು ಹೋದ್ದರಿಂದ ಇದನ್ನು ಸ್ಥಾಪಿಸಲಾಯಿತು. ಕೇಶವ ಮಂದಿರದ ಈಶಾನ್ಯಕ್ಕೆ 16 ಮೂಲೆಗಳುಳ್ಳ ನಕ್ಷತ್ರಾಕಾರದ ಜಗತಿಯ ಮೇಲೆ ನಿಂತ ಕೇದಾರೇಶ್ವರ ಗುಡಿಯಲ್ಲಿ ಸುಂದರವಾದ ಕೆತ್ತನೆಗಳನ್ನು ಕಾಣಬಹುದು. ಹೊರ ಗೋಡೆಗಳ ಚಿತ್ರಪಟ್ಟಿಕೆಗಳು, ಗೂಡುಗಳಲ್ಲಿ ಲತಾಪೀಠಗಳ ಮೇಲಿರುವ ದೇವತಾ ಮೂರ್ತಿಗಳು ಉತ್ತಮ ಕಲಾಕೃತಿಗಳು. ಅರ್ಜುನ ಮತ್ಸ್ಯಯಂತ್ರ, ಬ್ರಹ್ಮ ವಿಷ್ಣು ಶಿವರ ವಿವಿಧ ರೂಪಗಳು, ತ್ರಿಪಾದ ಭೃಂಗಿ, ದುರ್ಗಾ, ಗಣಪತಿ, ಮಹಿಷಮರ್ದಿನಿ, ತಾಂಡವೇಶ್ವರ, ಉಮಾಮಹೇಶ್ವರ, ಷಣ್ಮುಖ, ಕುಬೇರ, ಮನ್ಮಥ, ವರುಣ, ಮುಂತಾದ ವಿಗ್ರಹಗಳು ಅದ್ಭುತ ಕೆತ್ತನೆಗಳಾಗಿವೆ.

ಕುಣಿಗಲ್ಲಿನ ನರಸಿಂಹ ದೇವಾಲಯ ಹೊಯ್ಸಳ ಕಾಲದ್ದು. ಮೊದಲು ಗರ್ಭಗೃಹ, ಸುಕನಾಸಿ ಮತ್ತು ನವರಂಗಗಳಿದ್ದುವು. ಅನಂತರಕಾಲದಲ್ಲಿ ಮಹಾದ್ವಾರವನ್ನು ಜೋಡಿಸಲಾಯಿತು. ವಿಜಯನಗರದ ಕೊನೆಗಾಲದಲ್ಲಿ ಮುಖಮಂಟಪವನ್ನೂ ಮತ್ತೊಂದು ಮಹಾದ್ವಾರವನ್ನೂ ಕಟ್ಟಿಸಲಾಯಿತು. ಗರ್ಭಗುಡಿಯಲ್ಲಿ ಈಗ ಜನಾರ್ಧನ ಮೂರ್ತಿ ಇದೆ. ಇಲ್ಲಿರುವ ಹೊಯ್ಸಳ ಕಾಲದ ಪದ್ಮೇಶ್ವರ ಮಂದಿರವನ್ನು ಕಣಶಿಲೆಯಲ್ಲಿ ಕಟ್ಟಲಾಗಿದೆ. ಸೋಮೇಶ್ವರ ಗುಡಿ ಕಣಶಿಲೆಯದು. ಹೊಯ್ಸಳ ಕಾಲದಿಂದ ಪಾಳೆಯಗಾರರ ಕಾಲದ ವರೆಗಿನ ವಿವಿಧ ಸಮಯದಲ್ಲಿ ಕಟ್ಟಿಸಲಾದ್ದು. ಅದರ ಗರ್ಭಗುಡಿಯಲ್ಲಿರುವ ಪೂರ್ಣವೃತ್ತಾಕಾರದ ಲಿಂಗ ಬಹುಶಃ 12ನೆಯ ಶತಮಾನದ್ದು.

ಸೆಟ್ಟಿಕೆರೆಯ ಯೋಗಮಾಧವ ಗುಡಿಯನ್ನು ಮೊದಲು ಹೊಯ್ಸಳ 3ನೆಯ ನರಸಿಂಹನ ಆಳ್ವಿಕೆಯಲ್ಲಿ 1261ರಲ್ಲಿ ಗೋಪಾಲ ದಂಡನಾಯಕ ನಿರ್ಮಿಸಿದ. ವಿಜಯನಗರ ಕಾಲದಲ್ಲಿ ಇದು ಬಹುಮಟ್ಟಿಗೆ ಜೀರ್ಣೋದ್ಧಾರಗೊಂಡಿತು. ತ್ರಿಕೂಟಾಚಲವಾದ ಈ ದೇವಾಲಯದ ಪಶ್ಚಿಮದ ಗರ್ಭಗುಡಿಗೆ ಮಾತ್ರ ಶಿಖರ ಮತ್ತು ಸುಕನಾಸಿ ಇವೆ. 3 ಅಡಿ ಎತ್ತರದ ನಕ್ಷತ್ರಾಕಾರದ ಜಗತಿಯ ಮೇಲೆ ಇರುವ ಈ ಮಂದಿರದಲ್ಲಿ ಎರಡು ನವರಂಗಗಳಿವೆ. ರಮ್ಯ ಕೆತ್ತನೆಗಳಿಂದ ಕೂಡಿದ ಹೊಯ್ಸಳ ಶೈಲಿಯ ಬಾಗಿಲಿನ ಮೂಲಕ ನವರಂಗವನ್ನು ಪ್ರವೇಶಿಸಿದಾಗ ಬಲಕ್ಕಿರುವ ಗರ್ಭಗುಡಿಯಲ್ಲಿ 5 ಅಡಿ ಎತ್ತರದ ವೇಣುಗೋಪಾಲ, ಎಡಕ್ಕಿರುವ ಗರ್ಭ ಗುಡಿಯಲ್ಲಿ ಲಕ್ಷ್ಮೀನಾರಾಯಣ ಮತ್ತು ಎದುರಿಗಿನ ಮುಖ್ಯಗುಡಿಯಲ್ಲಿ ಗರುಡ ಪೀಠದ ಮೇಲೆ ಯೋಗಮಾಧವ ಮೂರ್ತಿಗಳು ಇವೆ. ಈ ಗರ್ಭಗುಡಿಯ ಬಾಗಿಲಿನಲ್ಲಿ ಒಂದು ಕಡೆ ರಾಮಾನುಜರ ಮತ್ತೊಂದು ಕಡೆ ನಮ್ಮಾಳ್ವಾರರ ಶಿಲ್ಪಗಳಿವೆ. ಯೋಗಮಾಧವ ಮೂರ್ತಿ 9 ಅಡಿ ಎತ್ತರದ, ಯೋಗಮುದ್ರೆಯಲ್ಲಿರುವ, ಕಿರೀಟ ಕಂಠಹಾರ ತೋಳಬಂದಿ ಬೆರಳುಂಗುರಗಳಿಂದ ಅಲಂಕೃತವಾದ ಸುಂದರ ಮೂರ್ತಿ. ನಸುನಗೆಯಿಂದ ಕೂಡಿದ ತುಟಿಗಳು ಮತ್ತು ಪೂರ್ಣ ತೆರೆದ ಕಣ್ಣುಗಳು ಯೋಗಮುದ್ರೆಗೆ ಸರಿಬರುವುದಿಲ್ಲ. ಇಲ್ಲಿಯ ಶಿವಾಲಯದಲ್ಲಿರುವ ಕೇಶವ ಮತ್ತು ಭೈರವ ಮೂರ್ತಿಗಳು ಸುಂದರ ಪ್ರಾಚೀನ ಶಿಲ್ಪಗಳು. ಪಾಳೆಯಗಾರರ ಕಾಲದ ರಂಗನಾಥ ಮತ್ತು ಹನುಮಂತ ದೇವಾಲಯಗಳೂ ಇಲ್ಲಿವೆ.

ತುರುವೇಕೆರೆಯಲ್ಲಿ ಚೆನ್ನಿಗರಾಯ ಮತ್ತು ಶಂಕರೇಶ್ವರ ದೇವಾಲಯಗಳು 1263ರ ಸುಮಾರಿನಲ್ಲಿ ಹೊಯ್ಸಳ ಮುಮ್ಮಡಿ ನರಸಿಂಹನ ದಳಪತಿ ಸೋಮನಿಂದ ನಿರ್ಮಿತವಾದವು. ಚನ್ನಿಗರಾಯಮಂದಿರ 3 ಅಡಿ ಎತ್ತರದ ನಕ್ಷತ್ರಾಕಾರದ ಜಗತಿಯ ಮೇಲೆ ನಿಂತ ಬಳಪದ ಕಲ್ಲಿನ ಹೊಯ್ಸಳ ಶೈಲಿಯ ಕಟ್ಟಡ. ಗರ್ಭಗೃಹ, ಸುಕನಾಸಿ, 9 ಅಂಕಣಗಳ ನವರಂಗ ಮತ್ತು ಮುಖಮಂಟಪ ಇರುವ ಈ ಮಂದಿರದ ಹೊರಗೋಡೆಗಳ ಮೇಲೆ ಕೆಳಭಾಗದಲ್ಲಿ ಚಿತ್ರಪಟ್ಟಿಕೆಗಳೂ ಮೇಲ್ಭಾಗದಲ್ಲಿ ಸ್ತಂಭಿಕೆ ಮತ್ತು ಶಿಖರಗಳ ಕೆತ್ತನೆಗಳೂ ಇವೆ. ಗರ್ಭಗುಡಿಯ ಮೇಲಿನ ಶಿಖರದಲ್ಲಿ ಸಾಧಾರಣ ಕೆತ್ತನೆಗಳುಳ್ಳ ಐದು ಅಂತಸ್ತುಗಳು ಇವೆ. ದ್ವಾರಪಾಲಕರ ಮತ್ತು ಮೇಲೆ ವೇಣುಗೋಪಾಲನ ಶಿಲ್ಪಗಳಿಂದ ಕೂಡಿದ ನವರಂಗದ ಬಾಗಿಲಿನಿಂದ ಪ್ರವೇಶಿಸಿದರೆ ಗರ್ಭಗುಡಿಯಲ್ಲಿ ಅಂದವಾದ, 5.1/2 ಅಡಿ ಎತ್ತರದ ಚೆನ್ನಕೇಶವಮೂರ್ತಿ ಇದೆ. ಇವರ ತೋರಣದಲ್ಲಿ ದಶಾವತಾರಗಳಿವೆ. ಶಂಕರೇಶ್ವರ ಗುಡಿ, ಚೆನ್ನಿಗರಾಯನ ಗುಡಿಯನ್ನು ಹೋಲುತ್ತದೆ. ಆದರೆ ಇದಕ್ಕೆ ಜಗತಿಯಿಲ್ಲ. ಇದಕ್ಕೆ ನಕ್ಷತ್ರಾಕಾರದ ಪಿರಮಿಡಿನಂಥ ಶಿಖರವಿದೆ. ನವರಂಗದ ಕಂಬಗಳು 16 ಮೂಲೆಗಳ ಪದ್ಮಗಳಂತೆ ಇವೆ. ಸಪ್ತಮಾತೃಕೆಯರು, ಗಣೇಶ, ಭೈರವ, ವೀರಭದ್ರ, ಷಣ್ಮುಖ ವಿಗ್ರಹಗಳು ಅಂದವಾಗಿವೆ. ಇಲ್ಲಿಯ ಗಂಗಾಧರ ಮತ್ತು ಬೇಟೆರಾಯ ಮಂದಿರಗಳು 18ನೆಯ ಶತಮಾನದವು. ಬೇಟೆರಾಯ (ಜನಾರ್ಧನ) ವಿಗ್ರಹ ಹೊಯ್ಸಳ ಶೈಲಿಯದು.

ನಿಟ್ಟೂರಿನಲ್ಲಿ ಹೊಯ್ಸಳ ಕಾಲದ ಬಸದಿಯಿದೆ. ಇದು ಗರ್ಭಗೃಹ, ಸುಕನಾಸಿ ಮತ್ತು ಒಂಬತ್ತು ಅಂಕಣಗಳ ಸುಂದರ ಕಟ್ಟಡ. ಅನಂತರದ ಕಾಲದಲ್ಲಿ ಈಶಾನ್ಯಭಾಗದಲ್ಲಿ ಪದ್ಮಾವತಿ ಗುಡಿಯನ್ನು ಕಟ್ಟಿಸಿ ಒಂದು ಮುಖಮಂಟಪದಿಂದ ಎರಡು ಕಟ್ಟಡಗಳನ್ನೂ ಜೋಡಿಸಲಾಗಿದೆ. ಇತ್ತೀಚೆಗೆ ಬ್ರಹ್ಮದೇವರ ಗುಡಿಯನ್ನು ಮೂಲ ಕಟ್ಟಡಕ್ಕೆ ದಕ್ಷಿಣದಲ್ಲಿ ಸೇರಿಸಲಾಗಿದೆ. ಹೊರಗೋಡೆಗಳಲ್ಲಿ ಅಲಂಕಾರ ಕೆತ್ತನೆಗಳಿಲ್ಲ. ನವರಂಗದ ಕಂಬಗಳು ವೈವಿಧ್ಯಪೂರ್ಣವಾಗಿವೆ. ಗರ್ಭಗುಡಿಯಲ್ಲಿರುವ ಶಾಂತಿನಾಥನ ಮೂರ್ತಿ ಸರಳಸುಂದರವಾದ್ದು.

ಕಡಬದ ಕೈಲಾಸೇಶ್ವರ ಮಂದಿರ ಚೋಳನಿರ್ಮಾಣ. ಇದು ಈಚೆಗೆ ಜೀರ್ಣೋದ್ಧಾರವಾಗಿದೆ. ಆದರೆ ಅಲ್ಲಿರುವ ಶ್ರೀರಾಮ ದೇವಾಲಯ ತ್ರಿಕೂಟಾಚಲ; ಉತ್ತರದ ಗರ್ಭಗುಡಿಯಲ್ಲಿರುವ ಯೋಗನರಸಿಂಹಮೂರ್ತಿ ಹೊಯ್ಸಳ ಕೃತಿಯಂತೆ ಕಾಣುತ್ತದೆ. ದಕ್ಷಿಣದ ಗರ್ಭಗುಡಿಯಲ್ಲಿ ಜನಾರ್ಧನನ ಮತ್ತು ಪಶ್ಚಿಮದ ಗರ್ಭಗುಡಿಯಲ್ಲಿ ವೇಣುಗೋಪಾಲನ ವಿಗ್ರಹಗಳಿವೆ.
ದೊಡ್ಡದಲಿವಟ್ಟದ ಲಕ್ಷ್ಮೀನರಸಿಂಹ ಮಂದಿರದ ವಿಶಾಲವಾದ ದ್ರಾವಿಡ ಶೈಲಿಯ ಕಟ್ಟಡ. ಅದರ ಮಹಾದ್ವಾರದ ಮೇಲೆ ಎತ್ತರವಾದ ಗೋಪುರವಿದೆ. ಉತ್ಸವಮೂರ್ತಿಯೆಂದು ಹೇಳಲಾದ ಮೂಲವಿಗ್ರಹದ ಕಿರೀಟ ಸುಂದರವಾದ್ದು. ಚಿಕ್ಕನಾಯಕನಹಳ್ಳಿಯ ವೆಂಕರಮಣ ಮಂದಿರ ದ್ರಾವಿಡ ಶೈಲಿಯ ದೊಡ್ಡ ಕಟ್ಟಡ. ಜಗತಿಯ ಮೇಲೆ ನಿಂತ ಈ ಮಂದಿರದ ಮೂಲಮೂರ್ತಿ 4 ಅಡಿ ಎತ್ತರದ ಸುಂದರಶಿಲ್ಪ. ನವರಂಗದ ಕಂಬಗಳ ಮೇಲೆ ವಿವಿಧ ಪ್ರಾಣಿಗಳ ಕೆತ್ತನೆಗಳಿವೆ. ಪಂಕಜನಹಳ್ಳಿಯ ಮಲ್ಲಿಕಾರ್ಜುನ ಗುಡಿ ದ್ರಾವಿಡ ಶೈಲಿಯ ದೊಡ್ಡಕಟ್ಟಡ, ಗರ್ಭಗುಡಿ, ಸುಕನಾಸಿ, ಪ್ರದಕ್ಷಿಣಾಪಥ, ನವರಂಗ, ಮುಖಮಂಟಪ, ಕೆಳಭಾಗದಲ್ಲಿ ಮತ್ತೊಂದು ಮಂಟಪ, ನಂದಿಮಂಟಪ, ಮಹಾದ್ವಾರ ಮತ್ತು ಪ್ರಾಕಾರಗಳು ಇವೆ.

ಅರಳಗುಪ್ಪೆಯ ಚೆನ್ನಕೇಶವ ಮಂದಿರ 13ನೆಯ ಶತಮಾನದ್ದು. ಹೊಯ್ಸಳ ಶೈಲಿಯಲ್ಲಿ, ನಕ್ಷತ್ರಾಕಾರದ ಜಗತಿಯ ಮೇಲೆ ನಿರ್ಮಿಸಲಾಗಿರುವ ಇದು ಗರ್ಭಗುಡಿ, ಸುಕನಾಸಿ, ನವರಂಗ ಮತ್ತು ಮುಖಮಂಟಪಗಳಿಂದ ಕೂಡಿ ಸುಂದರವಾಗಿದೆ. ಹೊರಗೋಡೆಗಳ ಕೆಳಭಾಗದಲ್ಲಿ ಆನೆ, ಕುದುರೆಸವಾರರು, ಹೂಬಳ್ಳಿಗಳು, ಪುರಾಣ ದೃಶ್ಯಗಳು, ಗೂಡುಗಳಲ್ಲಿ ಕುಳಿತ ಯಕ್ಷರು ಮತ್ತು ದೇವತಾಶಿಲ್ಪಗಳನ್ನು ಹೊಂದಿರುವ ಆರು ಚಿತ್ರಪಟ್ಟಿಕೆಗಳು ಇವೆ. ಗೋಡೆಯ ಮೇಲರ್ಧದಲ್ಲಿ ಲತಾಕುಂಜಗಳಲ್ಲಿರುವ ದೇವತಾಮೂರ್ತಿಗಳಲ್ಲಿ ಹೆಚ್ಚಿನವು ವಿಷ್ಣುವಿನ ವಿವಿಧ ರೂಪಗಳು. ಅವುಗಳಲ್ಲಿ ಹೆಚ್ಚಿನ ವಿಗ್ರಹಗಳನ್ನು ಕಡೆದವನು ಶಿಲ್ಪಿ ಹೋನೋಜನೆಂದು ವಿಗ್ರಹಗಳ ಪೀಠಗಳ ಮೇಲಿರುವ ಬರಹಗಳಿಂದ ತಿಳಿದುಬರುತ್ತದೆ. ಇಲ್ಲಿಯ ಶಿಲ್ಪಗಳು ಉತ್ತಮ ಕಲಾನೈಪುಣ್ಯದ ಕೃತಿಗಳು. ಗರ್ಭಗುಡಿಯ ಮೂಲಮೂರ್ತಿ 6 ಅಡಿಗಳ ಕೇಶವ, ಇದು ಭಿನ್ನವಾಗಿದೆ. ಇದರ ಬದಲು ಸಣ್ಣದಾದ ಮತ್ತೊಂದು ಹೊಯ್ಸಳ ಶೈಲಿಯ ಕೇಶವಮೂರ್ತಿಯನ್ನು ಗರುಡಪೀಠದ ಮೇಲೆ ನಿಲ್ಲಿಸಲಾಗಿದೆ. ಕೇಶವ ದೇವಾಲಯದ ಈಶಾನ್ಯಕ್ಕಿರುವ ಪಂಚಲಿಂಗ ಗುಡಿಗಳಲ್ಲಿ ಕಲ್ಲೇಶ್ವರ ಬಹುಶಃ ಪಲ್ಲವರ ಕಾಲದ್ದು. ಚಾಳುಕ್ಯಶೈಲಿಯ ಕಂಬಗಳಿಂದ ಕೂಡಿದ ನವರಂಗದ ಭುವನೇಶ್ವರಿಯಲ್ಲಿರುವ ಅಷ್ಟದಿಕ್ಪಾಲಕರ ಶಿಲ್ಪಗಳು ಅತ್ಯುತ್ತಮ ಕಲಾಕೃತಿಗಳು. ಒಂದೊಂದು ಮೂರ್ತಿಯಲ್ಲೂ ಮೂಡಿದ ವಿವಿಧ ಭಾವಗಳನ್ನೂ ಮಧ್ಯದಲ್ಲಿರುವ ತಾಂಡವೇಶ್ವರನ ಪ್ರಳಯನೃತ್ಯಭಂಗಿಯನ್ನೂ ಕಲ್ಲಿನಲ್ಲಿ ಶಿಲ್ಪಿ ಸೆರೆಹಿಡಿದಿದ್ದಾನೆ. ಉಳಿದ ಶಿವಾಲಯಗಳು ಈಚಿನವಾದರೂ ಅವುಗಳಲ್ಲೊಂದರಲ್ಲಿ ಚಾಳುಕ್ಯಶೈಲಿಯ ಸುಂದರವಾದ ಉಮಾಮಹೇಶ್ವರ ಮೂರ್ತಿ ಇದೆ.
ಎಡೆಯೂರಿನ ಸಿದ್ಧಲಿಂಗೇಶ್ವರ ಗುಡಿ 15ನೆಯ ಶತಮಾನದ ದ್ರಾವಿಡ ಶೈಲಿಯ ಕಟ್ಟಡ. ತೋಂಟದ ಸಿದ್ಧಲಿಂಗ ಯತಿಗಳ ಗದ್ದಿಗೆ (ಸಮಾಧಿ) ಇಲ್ಲಿದೆ. ಧನಿವಾಸದ ಚೆನ್ನವೀರಪ್ಪ ಒಡೆಯರ್ ಇದನ್ನು ಕಟ್ಟಿಸಿದ್ದೆಂಬುದು ಗುಡಿಯಲ್ಲಿರುವ ಶಾಸನದಿಂದ ತಿಳಿದುಬರುತ್ತದೆ. ನವರಂಗದ ಮತ್ತು ಮಂಟಪದ ಚಾವಣಿಯ ಮೇಲೆ ಸಿದ್ಧಲಿಂಗ ಯತಿಯ ಜೀವನದ ಕೆಲವು ದೃಶ್ಯಗಳನ್ನೂ ಶಿವನ ಲೀಲಾ ವಿನೋದಗಳನ್ನೂ ಕನ್ನಡ ತಲೆಬರೆಹದೊಂದಿಗೆ ಚಿತ್ರಿಸಲಾಗಿದೆ. ಇಲ್ಲಿಯ ಇತರ ಪ್ರೇಕ್ಷಣೀಯ ಕಟ್ಟಡಗಳಲ್ಲಿ ವೀರಶೈವ ಮಠ, ಚಿತ್ರ ಮಠ, ಸುಂದರ ತಟಾಕ ಮತ್ತು ಶಿಥಿಲವಾಗಿರುವ ವರದರಾಜಸ್ವಾಮಿ ಮಂದಿರ ಮುಖ್ಯವಾದವು. ಸಿದ್ಧಲಿಂಗ ಮಠದ ಗೊಂಬೆ ತೇರಿನಲ್ಲಿರುವ ಮರದ ಕೆತ್ತನೆಗಳು ಚಿತ್ತಾಕರ್ಷಕವಾಗಿವೆ.

ಕೋಟೆಗಳು : ಈ ಜಿಲ್ಲೆಯಲ್ಲಿ ಹೊಯ್ಸಳರ ಕಾಲದಿಂದ ಹಿಡಿದು ಮೈಸೂರರಸರ ಕಾಲದ ವರೆಗೆ ಕಟ್ಟಲಾದ ಹಲವಾರು ಕೋಟೆಗಳಿವೆ. ಈ ಪ್ರದೇಶದಲ್ಲಿ ಹೆಚ್ಚು ಸಂಖ್ಯೆಯ ಕೋಟೆಗಳಿರುವುದು ಅದರ ರಾಜಕೀಯ ಪ್ರಾಮುಖ್ಯ ಮತ್ತು ಅಲ್ಲಿ ನೆಲೆಸಿದ್ದ ಗೊಂದಲಮಯ ಸನ್ನಿವೇಶಗಳ ಅರಿವನ್ನು ಮಾಡಿಕೊಡುತ್ತವೆ. ಈ ಕೋಟೆಗಳಲ್ಲಿ ಗಿರಿದುರ್ಗಗಳು ಹೆಚ್ಚು. ಮಧುಗಿರಿ, ಮಿಡಿಗೇಶಿ, ಪಾವಗಡ, ನಿಡುಗಲ್, ಕೊರಟಗೆರೆ, ದೇವರಾಯದುರ್ಗ, ಚೆನ್ನರಾಯದುರ್ಗ, ಹುಲಿಯೂರುದುರ್ಗ, ಹುತ್ರಿದುರ್ಗ ಮತ್ತು ಶಿರಾ ಕೋಟೆಗಳು ಮುಖ್ಯವಾದುವು.

ನಿಡುಗಲ್ ಬಳಿಯ ಕಡಿದಾದ ಸುಂದರವಾದ ಬೆಟ್ಟದ ಸುತ್ತ ಇರುವ ಕೋಟೆ ಈ ಜಿಲ್ಲೆಯಲ್ಲಿ ಪ್ರಾಚೀನವಾದ್ದು. 1232ರ ಶಾಸನದಲ್ಲಿ ಇದರ ಉಲ್ಲೇಖವಿದೆ. ಇದು ಅತ್ಯಂತ ಅಭೇದ್ಯವಾದುದೆಂದು 1487ರ ಶಾಸನ ತಿಳಿಸುತ್ತದೆ. ಅನೇಕ ಸುತ್ತುಗಳ ರಕ್ಷಣಾಗೋಡೆಗಳು ಮತ್ತು ಅಧಿಕಸಂಖ್ಯೆಯ ಬಾಗಿಲುಗಳಿರುವ ಈ ಕೋಟೆಯಲ್ಲಿ ಧಾನ್ಯದ ಕಣಜಗಳು, ಎಣ್ಣೆಯ ಮತ್ತು ಮದ್ದಿನ ಉಗ್ರಾಣಗಳು, ನೀರಿನ ದೊಣೆಗಳು ಇವೆ. ಹೊಟ್ಟೆಣ್ಣನಾಯಕ ಕಟ್ಟಿಸಿದನೆಂದು 1653ರ ಶಾಸನದಲ್ಲಿ ಹೇಳಲಾದ ಬಸವನಗುಡಿ ಜೀರ್ಣಾವಸ್ಥೆಯಲ್ಲಿದೆ. ಅದರ ಬಳಿಯಿರುವ ಕಾಳಹಸ್ತೀಶ್ವರ ದೇವಾಲಯವನ್ನು ಶ್ರೀರಾಮ ಕಟ್ಟಿಸಿದನೆಂದೂ ಅನಂತರ 1670ರಲ್ಲಿ ಹರತಿಯ ತಿಮ್ಮಣ್ಣನಾಯಕ ಜೀರ್ಣೋದ್ಧಾರ ಮಾಡಿಸಿದನೆಂದೂ ಮತ್ತೊಂದು ಶಾಸನ ತಿಳಿಸುತ್ತದೆ. ಬದಿಯಲ್ಲೇ ಅರಮನೆಯ ಭಗ್ನಾವಶೇಷಗಳಿವೆ. ಅದರ ಬಳಿ ಚಾಳುಕ್ಯ ಇಮ್ಮಡಿ ಜಗದೇಕಮಲ್ಲನ ಕಾಲದಲ್ಲಿ 1115ರಲ್ಲಿ ಕಟ್ಟಲಾಯಿತೆಂದು ಶಾಸನವೊಂದರಲ್ಲಿ ಹೇಳಲಾದ ಹೊಯ್ಸಳ ಶೈಲಿಯ ನಾಗೇಶ್ವರ ಗುಡಿಯ ಅವಶೇಷಗಳಿವೆ. ಅದಕ್ಕೂ ಮೊದಲಿನ ಪಲ್ಲವ ಬಿಡಿ ಚೋಳರಸನಿಂದ ನಿರ್ಮಿತವಾದ ದೇವಾಲಯ ಇಲ್ಲಿ ಇತ್ತೆಂದು 8ನೆಯ ಶತಮಾನದ ಮತ್ತೊಂದು ಶಾಸನ ತಿಳಿಸುತ್ತದೆ.
ನಿಸರ್ಗಸೌಂದರ್ಯದ ನಡುವೆ ನೆಲಸಿರುವ ದೇವರಾಯದುರ್ಗ ಇತಿಹಾಸ ಪ್ರಸಿದ್ಧವಾದ್ದು. ಮೂರು ಸುತ್ತು ಕೋಟೆ ಮತ್ತು ಏಳು ಬಾಗಿಲುಗಳು ಉಳ್ಳ ಇದನ್ನು ಮೊದಲು ಅಲ್ಲಿಯ ಪಾಳೆಯಗಾರ ಕಟ್ಟಿಸಿದನೆಂದೂ ಅವನ ಪ್ರೀತಿಯ ಆನೆ ಇಳಿಜಾರಾದ ಗುಡ್ಡದ ತಪ್ಪಲಿನಲ್ಲಿ ಜಾರಿಬಿದ್ದು ಸತ್ತುದರಿಂದ ಆ ಸ್ಥಳಕ್ಕೆ ಆನೆಬಿದ್ದ ಸರಿಯೆಂದು ಹೆಸರಾಯಿತೆಂದೂ ಅನಂತರ ಜಡಕನೆಂಬ ನಾಯಕನ ವಶವಾದಾಗ ಜಡಕನದುರ್ಗವೆಂದು ಹೆಸರಾಯಿತೆಂದೂ ತರುವಾಯ ಮೈಸೂರಿನ ಚಿಕ್ಕದೇವರಾಜ ಒಡೆಯರ ವಶವಾದನಂತರ ಇದಕ್ಕೆ ದೇವರಾಯದುರ್ಗವೆಂಬ ಹೆಸರು ಬಂತೆಂದೂ ಹೇಳಲಾಗಿದೆ. ಮೂರು ಹಂತಗಳ ಬೆಟ್ಟದ ಮೊದಲ ತಪ್ಪಲಿನಲ್ಲಿ ಮಲ್ಲಪಟ್ಟಣ ಗ್ರಾಮ ಮತ್ತು ಲಕ್ಷ್ಮೀನಾರಾಯಣ ಗುಡಿ ಇವೆ. ಅವುಗಳ ಬದಿಯಲ್ಲಿ ಆನೆ ದೊಣೆ ಇದೆ. ಬೆಟ್ಟದ ಇಳಿಜಾರಿನಲ್ಲಿರುವ ಮಂಗಳಿ ದೊಣೆ ಮತ್ತು ಜಯ ದೊಣೆಗಳಿಂದ ಹುಟ್ಟುವ ಎರಡು ಝರಿಗಳು ಸೇರಿಕೊಂಡು ಜಯಮಂಗಳೀ ನದಿಯಾಗಿದೆ. ಅದೇ ಬದಿಯ ಮತ್ತೊಂದು ತಪ್ಪಲಿನಲ್ಲಿ ಸರ್ಕಾರಿ ಪ್ರವಾಸಿಮಂದಿರ, ಕ್ರೈಸ್ತಪಾದ್ರಿಗಳ ಬಂಗಲೆ, ರಾಮತೀರ್ಥ, ಧನುಸ್ತೀರ್ಥ, ರಾಮಸೀತೆಲಕ್ಷ್ಮಣರ ಪ್ರತಿಮೆಗಳಿರುವ ಗುಹೆ ಇವೆ. ಮೇಲಿನ ತಪ್ಪಲಿನಲ್ಲಿ ಲಕ್ಷ್ಮೀನರಸಿಂಹ ದೇವಾಲಯ ಮತ್ತು ಗರುಡನ ಸಣ್ಣ ಗುಡಿ ಇವೆ.
ಪಾವಗಡದ ಬಳಿಯ ಗುಡ್ಡದ ಮೇಲೆ 1405ರಲ್ಲಿ ವಿಜಯನಗರದ ಮೊದಲನೆಯ ದೇವರಾಯನ ದಳಪತಿ ಗೋಪಣ್ಣ ಕೋಟೆಯನ್ನು ಕಟ್ಟಿಸಿದನೆಂದು ಒಂದು ಶಾಸನ ತಿಳಿಸುತ್ತದೆ. ಮಧುಗಿರಿಯ ಕೋಟೆ ದಕ್ಷಿಣ ಕರ್ನಾಟಕದಲ್ಲೇ ಗಟ್ಟಿಯೂ ಸುಂದರವೂ ಆದದ್ದು. ಕೋಟೆಗೆ ಅನೇಕ ಬಾಗಿಲುಗಳು, ಒಳಭಾಗದಲ್ಲಿ ನೀರನ್ನೊದಗಿಸಲು ದೊಣೆಗಳು, ಅರಮನೆ, ಬೆಟ್ಟದ ತುದಿಯಲ್ಲಿ ಗೋಪಾಲ ಕೃಷ್ಣ ಗುಡಿ, ಭಂಡಾರ, ಎಣ್ಣೆ ಮತ್ತು ಧಾನ್ಯಗಳ ಕಣಜಗಳು ಇದ್ದುವು. ಮಿಡಿಗೇಶಿಯ ಕೋಟೆಯನ್ನು ಪಾಳೆಯಗಾರ ನಾಗರೆಡ್ಡಿ ನಿರ್ಮಿಸಿದ. ಇದು ಮಧುಗಿರಿಯ ಕೋಟೆಯನ್ನು ಹೋಲುತ್ತದೆ.

ಶಿರಾ ಕೋಟೆ ಇತರ ಕೋಟೆಗಳಂತೆ ಗಿರಿದುರ್ಗವಾಗಿಲ್ಲ. ಅದು ಸಮತಟ್ಟಾದ ನೆಲದ ಮೇಲೆ ಕಟ್ಟಿದ ಭೂದುರ್ಗ. ಮೊದಲಿಗೆ ಹಿಂದೂ ಪಾಳೆಯಗಾರರಿಂದ ನಿರ್ಮಿತವಾದ ಇದು ಕಾಲಾನುಕ್ರಮದಲ್ಲಿ ಬಿಜಾಪುರದ ಸುಲ್ತಾನರ, ಆಮೇಲೆ ಹೈದರ್ ಅಲಿ ಮತ್ತು ಟೀಪು ಸುಲ್ತಾನರ ವಶವಾಯಿತು. ಆ ಎಲ್ಲ ಕಾಲಗಳ ಕಟ್ಟಡಗಳ ಅವಶೇಷಗಳು ಇಲ್ಲಿ ಉಳಿದುಬಂದಿವೆ. ಕೋಟೆಯೊಳಗಡೆ ಕೆಲವು ವಸತಿಗಳ, ಭಂಡಾರದ, ಕಚೇರಿಗಳ ಮತ್ತು ಹನುಮಂತಗುಡಿಯ ಭಗ್ನಾವಶೇಷಗಳು ಕಾಣುತ್ತವೆ. ಅರಮನೆಯ ಅವಶೇಷಗಳ ಸುತ್ತ ಆಳವಾದ ಕಂದಕವಿದೆ.

ಶಿರಾದಲ್ಲಿ ಮೊಗಲರ ಕಾಲದ, ಬಿಜಾಪುರ ಸುಲ್ತಾನರ ಹಾಗೂ ಹೈದರ್ ಅಲಿ ಮತ್ತು ಟೀಪು ಸುಲ್ತಾನರ ಕಾಲದ ಹಲವಾರು ಮುಸ್ಲಿಮ್ ವಾಸ್ತುನಿರ್ಮಾಣಗಳು ಕಂಡುಬರುತ್ತವೆ. ಜುಮ್ಮಾ ಮಸೀದಿ (1696) ಮತ್ತು ಮಾಲಿಕ್ ರಿಹಾನ್ ದರ್ಗಾ (1657)-ಇವು ಸಾರಸೀಸ್ ಶೈಲಿಯ ನಿರ್ಮಾಣಗಳು. ದರ್ಗಾ ಬಿಜಾಪುರ ವಾಸ್ತುಶೈಲಿಯಲ್ಲಿದೆ. ಅದಕ್ಕೆ ಸೇರಿದಂತೆ ರಿಹಾನನಿಗೆ ಸಂಬಂಧಿಸಿದ ಕೆಲವು ಕಟ್ಟಡಗಳಿವೆ. ಬಳಿಯಲ್ಲಿಯೇ ಫರೀದುಲ್ಲಾ ಶಾಹ ಫಕೀರನ ಮತ್ತು ಕೆಲವರ ಸಮಾಧಿಗಳಿವೆ. ಶಿರಾದ ನವಾಬನೆಂದು ಗೌರವಿತನಾದ ಹೈದರ್ ಅಲಿ ಅಲ್ಲಿಯ ಕಟ್ಟಡಗಳಿಂದ ಪ್ರಭಾವಿತನಾಗಿ, ಬೆಂಗಳೂರು ಮತ್ತು ಶ್ರೀರಂಗಪಟ್ಟಣ ಅರಮನೆಗಳನ್ನು ಆ ಮಾದರಿಯಲ್ಲಿ ರೂಪಿಸಿದನೆಂದು ಹೇಳಲಾಗಿದೆ.						 (ಬಿ.ಕೆ.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ